
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ‘ಸತ್ತ ಆರ್ಥಿಕತೆ’ ಎಂಬ ಆರೋಪವನ್ನು ಮುಂದುವರಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅಮೆರಿಕ ವಿಧಿಸಿರುವ ಭಾರಿ ಸುಂಕಗಳಿಂದ ಭಾರತದ ಜವಳಿ ವಲಯ ತೀವ್ರ ಸಂಕಷ್ಟಕ್ಕೆ ಒಳಗಾಗಿದೆ ಎಂದು ಹೇಳಿದ್ದಾರೆ. ಉದ್ಯೋಗ ನಷ್ಟ, ರಫ್ತು ಕ್ಷೇತ್ರದಲ್ಲಿನ ಅನಿಶ್ಚಿತತೆ ಮತ್ತು ಕೈಗಾರಿಕೆಗಳ ಮೇಲೆ ಬಿದ್ದಿರುವ ದುಷ್ಪರಿಣಾಮಗಳ ನಡುವೆಯೂ ಕೇಂದ್ರ ಸರ್ಕಾರ ಸ್ಪಂದಿಸದಿರುವುದನ್ನು ಟೀಕಿಸಿದ ಅವರು, ಈ ಸ್ಥಿತಿಗೆ ಮೋದಿ ಸರ್ಕಾರವೇ ಕಾರಣ ಎಂದು ಆರೋಪಿಸಿದರು.
ಅಮೆರಿಕದ ಶೇ.50ರಷ್ಟು ಸುಂಕಗಳು ಭಾರತೀಯ ಜವಳಿ ರಫ್ತುದಾರರನ್ನು ಗಂಭೀರವಾಗಿ ಬಾಧಿಸುತ್ತಿದ್ದು, ಕಾರ್ಖಾನೆಗಳ ಮುಚ್ಚುವಿಕೆ, ಕಡಿಮೆಯಾದ ಬೇಡಿಕೆ ಮತ್ತು ಉದ್ಯೋಗ ಕಡಿತಗಳು ದೇಶದ ಆರ್ಥಿಕ ಸ್ಥಿತಿಯ ವಾಸ್ತವ ಚಿತ್ರಣವಾಗಿದೆ ಎಂದು ರಾಹುಲ್ ಎಕ್ಸ್ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಸರ್ಕಾರ ಈ ಬಿಕ್ಕಟ್ಟನ್ನು ಗಂಭೀರವಾಗಿ ಪರಿಗಣಿಸದೇ ನಿರ್ಲಕ್ಷ್ಯ ವಹಿಸಿದೆ ಎಂದು ಟೀಕಿಸಿರುವ ರಾಹುಲ್, 4.5 ಕೋಟಿಗೂ ಹೆಚ್ಚು ಉದ್ಯೋಗಗಳು ಹಾಗೂ ಲಕ್ಷಾಂತರ ಉದ್ಯಮಗಳು ಅಪಾಯದಲ್ಲಿದ್ದರೂ ಯಾವುದೇ ಪರಿಹಾರ ಕ್ರಮಗಳನ್ನು ಪ್ರಕಟಿಸಿಲ್ಲ ಎಂದು ಹೇಳಿದ್ದಾರೆ. ಸುಂಕ ವಿಚಾರದಲ್ಲೂ ಪ್ರಧಾನಿ ಮೌನವಾಗಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಅವರು, ಈ ಸ್ಥಿತಿಗೆ ಮೋದಿ ಸರ್ಕಾರದ ನೀತಿಗಳೇ ಕಾರಣ ಎಂದು ಪುನರುಚ್ಚರಿಸಿದ್ದಾರೆ.



















