
ಬೆಂಗಳೂರು: ರಾಜ್ಯ ಸರಕಾರವು ಕರ್ನಾಟಕದಲ್ಲಿ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿನ ಜನೌಷಧ ಕೇಂದ್ರಗಳನ್ನು ಸ್ಥಗಿತಗೊಳಿಸುವಂತೆ ಹೊರಡಿಸಿದ್ದ ಆದೇಶವನ್ನು ಧಾರವಾಡ ಹೈಕೋರ್ಟ್ ಪೀಠ ರದ್ದುಗೊಳಿಸಿದ್ದು ಈ ಮೂಲಕ ಸಿದ್ದರಾಮಯ್ಯ ಸರ್ಕಾರಕ್ಕೆ ಮುಖಭಂಗವಾಗಿದೆ.
ರಾಜ್ಯ ಸರ್ಕಾರವು ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಧಾನಮಂತ್ರಿ ಜನೌಷಧಿ ಕೇಂದ್ರ ಮುಚ್ಚುವಂತೆ ಸುತ್ತೋಲೆ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ರಾಕೇಶ್ ಮಹಾಲಿಂಗಪ್ಪ ಮತ್ತು ಇತರರು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಸರ್ಕಾರಿ ವಕೀಲರು ಸಹ ಆಕ್ಷೇಪಣೆ ಸಲ್ಲಿಸಿದ್ದು, ರಾಜ್ಯ ಸರ್ಕಾರವು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧವನ್ನು ಪೂರೈಸಲು ನಿರ್ಧರಿಸಿದೆ. ಆದ್ದರಿಂದ ಸರ್ಕಾರಿ ಆಸ್ಪತ್ರೆಗಳ ಒಳಗೆ ಜನೌಷಧಿ ಕೇಂದ್ರಗಳ ಕಾರ್ಯಾಚರಣೆ ಅನಿವಾರ್ಯವಲ್ಲ ಎಂದು ವಾದ ಮಂಡಿಸಿದರು. ಅಲ್ಲದೇ ಆಸ್ಪತ್ರೆ ಆವರಣದೊಳಗಿದ್ದ ಜನೌಷಧಿ ಕೇಂದ್ರಗಳನ್ನು ಮುಚ್ಚಿಸಲಾಗಿದೆ. ಇನ್ನುಳಿದಂತೆ ಅದರಾಚೆಗೆ ಇರುವ ಜನೌಷಧ ಕೇಂದ್ರಗಳನ್ನು ಸ್ಥಗಿತಗೊಳಿಸಿಲ್ಲ ಎಂದು ತಿಳಿಸಿದರು.
ಬಳಿಕ ವಾದ ಮಾಡಿದ ಅರ್ಜಿದಾರರ ಪರ ವಕೀಲರು, ಈ ಬಗ್ಗೆ ಸಮಾಲೋಚಿಸದೆ ಅಥವಾ ಯಾವುದೇ ಮುಂಚಿತ ಮಾಹಿತಿ ನೀಡಿದೆ ತರಾತುರಿಯಲ್ಲಿ ಮುಚ್ಚಿಸಲಾಗಿದೆ. ಉಚಿತ ಔಷಧ ವಿತರಣೆಗೆ ಸಣ್ಣ ಕೇಂದ್ರವೊಂದು ಅಡ್ಡ ಬರುತ್ತಿದೆ ಎಂಬುದು ರಾಜ್ಯದ ವಾದವಾಗಲು ಸಾಧ್ಯವಿಲ್ಲ. ಸರ್ಕಾರ ಯಾವಾಗಲೂ ಉಚಿತವಾಗಿ ಔಷಧ ನೀಡುತ್ತಿದೆ. ನಾವಿಬ್ಬರೂ ಸಾರ್ವಜನಿಕ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಕೋರ್ಟ್ಗೆ ತಿಳಿಸಿದರು.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ವಾದ ಪ್ರತಿವಾದ ಆಲಿಸಿ ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಜನೌಷಧಿ ಕೇಂದ್ರಗಳನ್ನು ಮುಚ್ಚುವಂತೆ ನಿರ್ದೇಶಿಸಿ ಮೇ 14 ರಂದು ಹೊರಡಿಸಲಾದ ಆದೇಶವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ.






















































