
ಮಣಿಪಾಲ: ಹೊಂಬಾಳೆ ಫಿಲಂಸ್ ನಿರ್ಮಾಣದ, ರಿಷಬ್ ಶೆಟ್ಟಿ ನಿರ್ದೇಶನ ಮಾಡಿರುವ ‘ಕಾಂತರಾ ಚಾಪ್ಟರ್ 1’ ಚಿತ್ರವು ಅಕ್ಟೋಬರ್ 2ರಂದು ರಿಲೀಸ್ ಆಗಲಿದ್ದು ಈಗಾಗಲೇ ಪ್ರಚಾರ ಕಾರ್ಯಕ್ರಮದಲ್ಲಿ ತೊಡಗಿರುವ ಚಿತ್ರತಂಡವು ಮುಂದೆ ಚೆನ್ನೈನಲ್ಲಿ ಪ್ರಚಾರ ಮಾಡಲು ಯೋಜನೆ ರೂಪಿಸಿತ್ತು. ಆದರೆ ಕರೂರ್ ನಲ್ಲಿ ಟಿವಿಕೆ ಮುಖ್ಯಸ್ಥ, ನಟ ವಿಜಯ್ ರ್ಯಾಲಿಯಲ್ಲಿ ನಡೆದ ಕಾಲ್ತುಳಿತದಿಂದ ಉಂಟಾದ ಅಪಾರ ಸಾವು ನೋವಿನ ಕಾರಣದಿಂದ ಕಾಂತಾರ ಚಿತ್ರ ತಂಡವು ಚೆನ್ನೈ ಕಾರ್ಯಕ್ರಮವನ್ನು ರದ್ದು ಮಾಡಿದೆ.
ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ಹೊಂಬಾಳೆ ಫಿಲಂಸ್ ‘ಇತ್ತೀಚಿನ ದುರದೃಷ್ಟಕರ ಘಟನೆಯಿಂದಾಗಿ ನಾವು ನಾಳೆ ಚೆನ್ನೈನಲ್ಲಿ ನಡೆಸಬೇಕಿದ್ದ ‘ಕಾಂತರಾ ಚಾಪ್ಟರ್ 1′ ಪ್ರಚಾರ ಕಾರ್ಯಕ್ರಮವನ್ನು ರದ್ದುಗೊಳಿಸುತ್ತಿದ್ದೇವೆ. ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಬಾಧಿತರೊಂದಿಗೆ ಇವೆ. ಸೂಕ್ತ ಸಮಯದಲ್ಲಿ ತಮಿಳುನಾಡಿನಲ್ಲಿ ನಮ್ಮ ಪ್ರೇಕ್ಷಕರನ್ನು ಭೇಟಿ ಮಾಡಲು ನಾವು ಎದುರು ನೋಡುತ್ತಿದ್ದೇವೆ’ ಎಂದು ಹೇಳಿದೆ.



















