
ಗದಗ: ಜಾಗತಿಕ ಮಟ್ಟದಲ್ಲಿ ಯುದ್ಧದ ಆತಂಕ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಕೊರತೆಯ ಹಿನ್ನೆಲೆಯಲ್ಲಿ ಗದಗದ ಜಗದ್ಗುರು ತೋಂಟದಾರ್ಯ ಮಠದ ಶ್ರೀ ಸಿದ್ಧರಾಮ ಸ್ವಾಮೀಜಿ ಜನರಿಗೆ ಇಂಧನ ಉಳಿತಾಯದ ಮಹತ್ವದ ಸಂದೇಶ ನೀಡಿದ್ದಾರೆ. ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬಳಕೆಯನ್ನು ಕಡಿಮೆ ಮಾಡಬಹುದು ಎಂದು ಅವರು ಸಲಹೆ ನೀಡಿದ್ದಾರೆ.
ನಗರದ ತೋಂಟದಾರ್ಯ ಮಠದಲ್ಲಿ ಮಾತನಾಡಿದ ಅವರು, ಗ್ಯಾಸ್ ಉಳಿತಾಯದ ದೃಷ್ಟಿಯಿಂದ ಬೇಯಿಸಿದ ಆಹಾರವನ್ನು ಕಡಿಮೆ ಮಾಡಿ, ನೆನೆಸಿದ ಕಾಳುಗಳು ಹಾಗೂ ಹಸಿ ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ. ಇದರಿಂದ ಆರೋಗ್ಯಕ್ಕೂ ಲಾಭವಾಗುವುದರ ಜೊತೆಗೆ ಇಂಧನ ಬಳಕೆಯೂ ಕಡಿಮೆಯಾಗುತ್ತದೆ ಎಂದು ತಿಳಿಸಿದರು.
ಇಂಧನದ ಕೊರತೆ ಮತ್ತು ಬೆಲೆ ಏರಿಕೆಯಿಂದ ರಾಜ್ಯದ ಅನೇಕ ಮಠಗಳಲ್ಲಿ ನಡೆಯುವ ದಾಸೋಹ ವ್ಯವಸ್ಥೆಯ ಮೇಲೂ ಪರಿಣಾಮ ಬೀರಿದೆ. ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಬ್ಬರೂ ಇಂಧನವನ್ನು ಮಿತವಾಗಿ ಬಳಸಬೇಕು ಎಂದು ಕರೆ ನೀಡಿದರು.


ಅನಗತ್ಯವಾಗಿ ವಾಹನಗಳನ್ನು ಬಳಸುವುದನ್ನು ತಪ್ಪಿಸಿ, ಅಗತ್ಯವಿದ್ದಾಗ ಮಾತ್ರ ಪ್ರಯಾಣ ಮಾಡಿ. ಸಣ್ಣ ಕೆಲಸಗಳಿಗೆ ನಡೆದು ಹೋಗುವುದು ಅಥವಾ ಸೈಕಲ್ ಬಳಸುವುದು ಉತ್ತಮ ಎಂದು ಹೇಳಿದರು.
ಜಾಗತಿಕ ರಾಜಕೀಯದ ಕುರಿತು ಪ್ರತಿಕ್ರಿಯಿಸಿದ ಶ್ರೀಗಳು, ಯುದ್ಧದಿಂದ ಯಾವುದೇ ದೇಶಕ್ಕೂ ಪ್ರಯೋಜನವಿಲ್ಲ ಎಂದು ಹೇಳಿ, ವಿಶ್ವದ ನಾಯಕರು ಶಾಂತಿ ಮಾತುಕತೆಯ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಮನವಿ ಮಾಡಿದರು.







