
ಸುವರ್ಣ ವಿಧಾನಸೌಧ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ ಗೃಹಲಕ್ಷ್ಮೀ ಯೋಜನೆ ಕುರಿತು ಲಕ್ಷ್ಮೀ ಹೆಬ್ಬಾಳ್ಕರ್ ತಪ್ಪು ಮಾಹಿತಿ ನೀಡಿದ್ದರೆ ಹಕ್ಕುಚ್ಯುತಿ ಮಂಡಿಸಿ. ಅದಕ್ಕೂ ಮೊದಲು ನರೇಗಾ ಹಣ, ನೀರಾವರಿ, ಜಲಜೀವನ್ ಮಿಷನ್ ಕೇಂದ್ರದಿಂದ ಬಂದಿಲ್ಲ. ಮಾನ ಮರ್ಯಾದೆ ಇದ್ದರೆ ಬಿಜೆಪಿಯವರು ಅದಕ್ಕೆ ಉತ್ತರಿಸಲಿ ಎಂದು ಆಕ್ರೋಷ ವ್ಯಕ್ತಪಡಿಸಿದ್ದಾರೆ.
ಪಂಚ ಗ್ಯಾರಂಟಿಗಳು ಸೇರಿ ನಮ್ಮ ಕೈ ಗಟ್ಟಿಯಾಗಿದೆ. ಒಂದು ರುಪಾಯಿ ಕೂಡ ಭ್ರಷ್ಟಾಚಾರ ಇಲ್ಲದೆ ಫಲಾನುಭವಿಗಳಿಗೆ ಹಣ ನೀಡುತ್ತಿದ್ದೇವೆ. ಬಿಜೆಪಿಯವರು ಅನಗತ್ಯವಾಗಿ ವಿವಾದ ಮಾಡುತ್ತಿದ್ದು, ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹಣ ತಿಂದುಬಿಟ್ಟಿದ್ದಾರಾ? ಎಂದು ಪ್ರಶ್ನಿಸಿದ ಡಿಕೆಶಿ ತಪ್ಪು ಮಾಹಿತಿ ನೀಡಿದ್ದರೆ ಹಕ್ಕುಚ್ಯುತಿ ಮಂಡಿಸಲಿ. ನಮಗೆ ಕೇಂದ್ರದಿಂದ ಬರಬೇಕಾಗಿದ್ದ ನರೇಗಾ ಹಣ ಬಂದಿಲ್ಲ. ನೀರಾವರಿ ಹಣ ಬಂದಿಲ್ಲ. ಜಲಜೀವನ್ ಮಿಷನ್ ಹಣ ಬಂದಿಲ್ಲ. ಜಿಎಸ್ಟಿಯಿಂದ 15,000ಕೋಟಿ ರು. ನಷ್ಟ ಉಂಟಾಗಿದೆ. ಮಾನ ಮರ್ಯಾದೆ ಇದ್ದರೆ ಬಿಜೆಪಿಯವರು ಇದರ ಬಗ್ಗೆ ಮಾತನಾಡಲಿ ಎಂದು ವಾಗ್ದಾಳಿ ನಡೆಸಿದರು.
ಪಂಚ ಗ್ಯಾರಂಟಿ ಹಣ ಜನರಿಗೆ ನೀಡಲು ನಾವು ಬದ್ಧ. ಸ್ವಲ್ಪ ಹೆಚ್ಚು ಕಡಿಮೆಯಾಗಬಹುದು. ಗುತ್ತಿಗೆದಾರರ ಬಿಲ್‌ಗಳು 3 ವರ್ಷವಾದರೂ ಕೊಟ್ಟಿಲ್ಲ. ಅವರು ಕೆಲಸ ಮಾಡುತ್ತಿಲ್ಲವೇ?. ಸಂಬಂಧಪಟ್ಟ ಸಚಿವರು ಕಾಣೆಯಾಗಿದ್ದಾರೆ ಎಂದು ಟ್ರೋಲ್ ಮಾಡುತ್ತಿರುವ ಬಗ್ಗೆ ಮಾತನಾಡಿ ಅವರು, ‘ಸಚಿವರು ಎಲ್ಲೂ ಹೋಗಿಲ್ಲ, ವಿಧಾನಸೌಧದಲ್ಲೇ ಇದ್ದಾರೆ. ಅವರದ್ದು ಇದೇ ಕ್ಷೇತ್ರ. ಅವರು ಬಂದಿದ್ದನ್ನು ನಾನೂ ನೋಡಿದ್ದೇನೆ. ಸುಮ್ಮನೆ ಅಪಪ್ರಚಾರ ಮಾಡಬಾರದು’ ಎಂದು ಹೇಳಿದರು.





