
ಉತ್ತರ ಪ್ರದೇಶ: ಭಾನುವಾರ ಉತ್ತರ ಪ್ರದೇಶದ ಮಹಾರಾಜಗಂಜ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 24 ರಲ್ಲಿ ಗೂಗಲ್ ಮ್ಯಾಪ್ ನಂಬಿ ಹೊರಟ ಕಾರೊಂದು ನಿರ್ಮಾಣ ಹಂತದ ಫ್ಲೈ ಓವರ್ ನಲ್ಲಿ ತಲೆ ಕೆಳಗಾಗಿ ಸಿಲುಕಿಕೊಂಡಿರುವ ಘಟನೆ ನಡೆದಿದೆ.
ಜೂನ್ 8ರಂದು ನೇಪಾಳದ ಕುಟುಂಬವೊಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಾರಿನಲ್ಲಿ ಹೊರಟಿದ್ದು ಆದರೆ ಕಾರು ಚಾಲಕನಿಗೆ ಮಾರ್ಗ ಸರಿಯಾಗಿ ಗೊತ್ತಿರದ ಕಾರಣ ಗೂಗಲ್ ಮ್ಯಾಪ್ ನಂಬಿಕೊಂಡು ಪ್ರಯಾಣಿಸಿದ್ದಾನೆ. ಮಧ್ಯರಾತ್ರಿ ಸುಮಾರು 1 ಗಂಟೆಯ ಹೊತ್ತಿಗೆ ಕಾರು ಉತ್ತರ ಪ್ರದೇಶದ ಮಹಾರಾಜಗಂಜ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 24 ರಲ್ಲಿ ಸಂಚರಿಸುವ ವೇಳೆ ನಿರ್ಮಾಣ ಹಂತದ ಮಾರ್ಗವನ್ನು ಗೂಗಲ್ ಮ್ಯಾಪ್ ತೋರಿಸಿದೆ. ಇದರ ಅರಿವಿಲ್ಲದ ಚಾಲಕ ಗೂಗಲ್ ಮ್ಯಾಪ್ ತೋರಿಸಿದ ದಾರಿಯಲ್ಲಿ ಹೋದಾಗ ಫ್ಲೈ ಓವರ್ ಮಧ್ಯದಲ್ಲಿ ಕಾಮಗಾರಿ ನಡೆಯುತ್ತಿದ್ದರಿಂದ ಮುಂದಕ್ಕೆ ಮಾರ್ಗ ಇರಲಿಲ್ಲ. ಇದನ್ನು ಗಮನಿಸಿದ ಚಾಲಕ ಒಮ್ಮೆಲೆ ಬ್ರೇಕ್ ಹಾಕಿದ್ದು ಆದರೆ ಕಾರು ನಿಲ್ಲುವಷ್ಟರಲ್ಲಿ ಫ್ಲೈ ಓವರ್ ಅಂಚಿಂದ ಕೆಳಮುಖವಾಗಿ ಬಿದ್ದು ಸಿಲುಕಿಕೊಂಡಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.
ಕಾಮಗಾರಿ ನಡೆಯುತ್ತಿದ್ದ ಕಾರಣ ಅಧಿಕಾರಿಗಳು ರಸ್ತೆಗೆ ಯಾವುದೇ ಫಲಕಗಳನ್ನು ಹಾಕದೆ ವಾಹನ ಸವಾರರಿಗೆ ಗೊಂದಲ ಸೃಷ್ಟಿಸಿದ್ದು ಹೊಸದಾಗಿ ಈ ಮಾರ್ಗದಲ್ಲಿ ಬರುವವರು ಸರಿಯಾದ ಫಲಕವಿಲ್ಲದೆ ಫ್ಲೈ ಓವರ್ ಮಾರ್ಗದಲ್ಲೇ ಸಂಚರಿಸಿ ಬಳಿಕ ವಾಪಸ್ ಬರುತ್ತಾರೆ ಎಂದು ಅಲ್ಲಿನ ಸ್ಥಳೀಯರು ತಿಳಿಸಿದ್ದಾರೆ.



















