30.9 C
Udupi
Monday, April 13, 2026
spot_img
spot_img
HomeBlogಗುರುಪೂರ್ಣಿಮೆ

ಗುರುಪೂರ್ಣಿಮೆ

ಮಾಲತಿ ಜಿ.ಪೈ

ಗುರುಪೂರ್ಣಿಮೆ!
ಏನೆಂದು ವರ್ಣಿಸಲಿ ನಿನ್ನ ಮಹಿಮೆ!
ಲೇಖನಿ ಸಾಲದೆನ್ನುವಳು ಭೂರಮೆ!
ಶಾಯಿ ಸಾಲ ತರಬೇಕೆಂಬನು ರತ್ನಾಕರ!
ಪ್ರಭೆ ಎಲ್ಲಿಂದ ತರಲೆಂದನು ಪ್ರಭಾಕರ!
ನಿನ್ನ ಪದ ತಲಕ್ಕೊಂದು ನನ್ನ ಜೋಡಿ ಕರ!
ಎಂದಳಾ ತುಳಸಿಪ್ರಿಯೆ ಭಗವತಿ ||

ಆಶಾಡ ಮಾಸದ ಹುಣ್ಣಿಮೆಯ ದಿನವನ್ನು ಗುರುಪೂರ್ಣಿಮೆ ಎಂದು ಕರೆಯುವುದು ವಾಡಿಕೆ. ಯೋಗ ಸಂಪ್ರದಾಯದಲ್ಲಿ ಪರಶಿವನು ಸಪ್ತರ್ಷಿಗಳಿಗೆ ಯೋಗ ವಿದ್ಯೆಯನ್ನು ಧಾರೆಯೆರೆದು ಜಗತ್ತಿಗೆ ಪ್ರಥಮಗುರು ಎನಿಸಿಕೊಂಡದ್ದು ಇದೇ ದಿನ. ವೇದವ್ಯಾಸ ಮಹರ್ಷಿಗಳು ಪುಟ್ಟಿದ ಶುಭದಿನವನ್ನು ವ್ಯಾಸ ಪೂರ್ಣಿಮೆ ಎಂದು ಕರೆಯುವುದು ರೂಢಿಯಲ್ಲಿ ದೆ.
ಅದ್ಭುತ ಅರ್ಥವ್ಯಾಪ್ತಿ ಹಾಗು ಹಿನ್ನೆಲೆಯನ್ನು ಹೊಂದಿರುವ ಗುರುಪೂರ್ಣಿಮೆಯನ್ನು ಎಲ್ಲಾ ಧರ್ಮದವರು ಆಚರಿಸುತ್ತಾರೆ ಈ ಆಚರಣೆಯ ಹಿಂದೆ ಶ್ರೀಮಂತ ಇತಿಹಾಸವಿದೆ. ಈ ಶುಭದಿನದಂದು ಶಿಷ್ಯರು ತಮ್ಮ ಗುರುಗಳ ಸ್ಮರಣಾರ್ಥವಾಗಿ ಧಾರ್ಮಿಕ ಚಟುವಟಿಕೆ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಕೈಗೊಂಡು ಕೃತಾರ್ಥರಾಗುತ್ತಾರೆ.
ಇಂದು ನಾವು ನಮ್ಮ ಗುರುಗಳಿಗೆ ವಂದನೆ ಸಲ್ಲಿಸುವ ದಿನ. ಗುರುವಿನ ಮಹತ್ವವನ್ನು ಸಾರುವ ದಿನ. ಗುರು ನಮಗೆ ಜೀವನದಲ್ಲಿ ಸರಿಯಾದ ದಿಕ್ಕು ಸೂಚಿಸುವ, ನಮ್ಮ ಕೈ ಹಿಡಿದು ನಡೆಸುವ, ಪರಮಾತ್ಮನ ಅರಿವನ್ನು ತಿಳಿಯಲು ನಮ್ಮೊಳಗಿರುವ ನಮ್ಮ ಆತ್ಮವನ್ನು ಜಾಗೃತಿಗೊಳಿಸುವ ಮಹತ್ವದ ವ್ಯಕ್ತಿ. ಆಧ್ಯಾತ್ಮದ ಹಾದಿಯಲ್ಲಿ ನಮ್ಮನ್ನು ನಡೆಸಿ, ನಮ್ಮ ಗುರಿ ಮುಟ್ಟಲು ಸಹಾಯ ಮಾಡುವವನೇ “ಗುರು”. ಹುಡುಕಿದರೆ ಸಿಗುವವನಲ್ಲ ಗುರು, ನಮ್ಮನ್ನು ಹುಡುಕಿ, ನಾವು ಗುರುವನ್ನು ಕಾಣುವ ಮಟ್ಟಿಗೆ ಸಾಧನೆ ಮಾಡಿದ್ದರೆ ತಾನಾಗೇ ನಮ್ಮ ಬಳಿಗೆ ಬರುವವನು. ಗುರುವಿನ ಮುಖಾಂತರವೇ ಪರಮಾತ್ಮನ ಅರಿವು ಅರಿಯಬೇಕಾಗಿರುವುದರಿಂದ, ನಾವು ಆಷಾಢ ಪೌರ್ಣಮಿಯಂದು ಮಾತ್ರ ಗುರುವನ್ನು ಪೂಜಿಸದೆ.. ಅನುದಿನ, ಅನುಕ್ಷಣ, ಗುರುವನ್ನು ಅಂತರಂಗದಲ್ಲೇ ಪೂಜಿಸುತ್ತಾ ನಮ್ಮನ್ನು ನಾವು ಸಮರ್ಪಿಸಿಕೊಳ್ಳಬೇಕು. ಹೀಗೆ ನನ್ನದೇನೂ ಇಲ್ಲವೆಂಬ ಭಾವ ನಮ್ಮಲ್ಲಿ ಸದಾ ಜಾಗೃತವಾಗಿಟ್ಟುಕೊಂಡು, ಗುರುವಿಗೆ ಶರಣಾದರೆ ಮಾತ್ರ ನಮ್ಮ ಗುರಿ ಮುಟ್ಟುವ ಪ್ರಯತ್ನ ಸಫಲವಾಗುತ್ತದೆ.

ಉಪನಿಷತ್ತಿನ ಪ್ರಕಾರ “ಗು” ಎಂದರೆ ಅಂಧಕಾರವೆಂದೂ “ರು” ಎಂದರೆ ದೂರೀಕರಿಸುವವ ಅಥವಾ ಅಜ್ಞಾನದ ಅಂಧಕಾರವನ್ನು ನಿವಾರಿಸಿ ಜ್ಞಾನದ ಹಾದಿಯಲ್ಲಿ ನಡೆಸುವವ ಎಂಬ ಅರ್ಥ ಬರುತ್ತದೆ. ಸಂಸ್ಕೃತದಲ್ಲಿ “ಗುರು” ಪದಕ್ಕೆ ಭಾರವಾದ ಎನ್ನುವ ಅರ್ಥವೂ ಇದೆ. ಯಾರು ಜ್ಞಾನದಿಂದ ತುಂಬಿರುವನೋ ಅವನೇ ಗುರು.

ಸ್ಕಂದ ಪುರಾಣದ “ಗುರುಗೀತೆ”ಯಲ್ಲಿ ಗುರುವನ್ನು ನಂದಾದೀಪದಂತೆ ಬೆಳಗುವ ಜ್ಯೋತಿಯಂತೆ ಎಂದು ಗುರುವಿನ ಹಿರಿಮೆಯನ್ನು ವಿಸ್ತಾರವಾಗಿ ತಿಳಿಸಿಲಾಗಿದೆ :
ಅಖಂಡ ಮಂಡಲಾಕಾರಂ ವ್ಯಾಪ್ತಂ ಯೇನಾ ಚರಾಚರಂ
ತತ್ಪದಂ ದರ್ಶಿತಂ ಯೇನಾ ತಸ್ಮೈ ಶ್ರೀಗುರವೇ ನಮಃ |

ಆದಿಗುರು ಶ್ರೀ ಶಂಕರಾಚಾರ್ಯರು ಗುರು ಸ್ತೋತ್ರವನ್ನು ಹೀಗೆ ಹೇಳುತ್ತಾರೆ :
ಗುರುರ್ಬ್ರಹ್ಮಾ ಗುರುರ್ವಿಷ್ಣುಃ | ಗುರುರ್ದೇವೋ ಮಹೇಶ್ವರಃ |
ಗುರುಸ್ಸಾಕ್ಶಾತ್ ಪರಬ್ರಹ್ಮಃ | ತಸ್ಮೈ ಶ್ರೀ ಗುರವೇ ನಮಃ ||
ಗುರುವು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರನ ಸ್ವರೂಪಿಯಾಗಿದ್ದು, ಅದಕ್ಕೂ ಮಿಗಿಲಾದ ಪರಬ್ರಹ್ಮ ತತ್ತ್ವವೇ ಆಗಿದ್ದಾನೆ. ಅಂಥ ಗುರುವಿಗೆ ಪ್ರಣಾಮಗಳು ಎಂಬ ಆಶಯವಿರುತ್ತದೆ.

ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ |
ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರವೇ ನಮಃ ||

ಅಂದರೆ ನಮ್ಮಲ್ಲಿರುವ ಅಜ್ಞಾನವೆಂಬ ಕಣ್ಣಿಗೆ ಅಂಟಿದ ಅಂಧಕಾರವನ್ನು ಜ್ಞಾನವೆಂಬ ಶಾಲಾಕೆಯಿಂದ ಸ್ಪರ್ಶಿಸಿ ಶಿಷ್ಯನ ಏಳಿಗೆಗೆ ಬೇಕಾದ ಸೋಪಾನವನ್ನು ಹತ್ತಿಸುವ, ಸಾಧನೆಯ ಮಾರ್ಗದರ್ಶನ ಮಾಡುವ ಶ್ರೀ ಗುರುವಿಗೆ ವಂದನೆಗಳು.

ಹೀಗೆ ನಮ್ಮ ಪರಂಪರೆಯಲ್ಲಿ ಅನಾದಿ ಕಾಲದಿಂದಲೂ ಗುರುವಿನ ಮಹತ್ವವನ್ನು ಸಾರುತ್ತಾ

ನ ಗುರೋರಧಿಕಂ ತತ್ವಂ, ನ ಗುರೋರಧಿಕಂ ತಪಃ |
ತತ್ವ ಜ್ಞಾನಾತ್ ಪರಂ ನಾಸ್ತಿ, ತಸ್ಮೈ ಶ್ರೀ ಗುರವೇ ನಮಃ ||
ಅಂದರೆ ಗುರುವಿಗಿಂತ ಮೀರಿದ ತತ್ವ, ತಪಸ್ಸು ಬೇರೆ ಯಾವುದೂ ಇಲ್ಲ. ಜ್ಞಾನದ ದಾರಿದೀಪ ತೋರುವವನಾದ ಶ್ರೀ ಗುರುವೇ ನಿನಗೆ ವಂದನೆಗಳು.
ಶಾಶ್ವತವಾದ ಆನಂದವನ್ನು ಹೊಂದುವುದು ಸದ್ಗುರುವಿನ ಅನುಗ್ರಹದಿಂದ ಮಾತ್ರವೇ ಸಾಧ್ಯವೆಂದು ಶ್ರೀ ಶಂಕರಾಚಾರ್ಯರು ತಮ್ಮ ಗುರು ಅಷ್ಟಕಮ್ ನಲ್ಲಿ ಕೂಡ ಹೇಳಿದ್ದಾರೆ :
ವೇದ, ಶಾಸ್ತ್ರ ಪಾರಂಗತನಾಗಿ ಅನೇಕ ವಿದ್ಯೆಗಳನ್ನು ತಿಳಿದವನಾಗಿದ್ದರೂ ಕೂಡ ಸದ್ಗುರುವಿನ ಚರಣಗಳಲ್ಲಿ ನಿಷ್ಠೆ ಇಡದಿದ್ದರೆ ಆತನಿಗೆ ಮುಕ್ತಿಯಿಲ್ಲ.

ಕ್ಷಮಾಮಂಡಲೇ ಭೂಪಭೂಪಾಲಬೃಂದೈ:
ಸದಾ ಸೇವಿತಂ ಯಸ್ಯ ಪಾದಾರವಿಂದಮ್ ||೫||

ಭೂಮಂಡಲದಲ್ಲಿ ಅನೇಕರಿಂದ ಪಾದ ಪೂಜಿಸಿ ಕೊಳ್ಳುವಂತಹ ವ್ಯಕ್ತಿಯಾಗಿದ್ದರೂ ಕೂಡ ತನ್ನ ಗುರುಗಳ ಪಾದ ಪೂಜಿಸದವನು ಮೇರು ವ್ಯಕ್ತಿತ್ವದವನಾಗಿದ್ದರೂ ಕೂಡ ವ್ಯರ್ಥವೇ.

ಯಶೋ ಮೇ ಗತಂ ದಿಕ್ಷು ದಾನಪ್ರತಾಪಾತ್
ಜಗದ್ವಸ್ತು ಸರ್ವಂ ಕರೇ ಯತ್ಪ್ರಸಾದಾತ್ ||೬||

ಅನೇಕ ದಾನ ಧರ್ಮಗಳನ್ನು ಮಾಡಿ ಇಡೀ ಜಗತ್ತನ್ನೇ ಗೆದ್ದಿರುವೆನೆಂದು ಕೊಂಡಾಗಲೂ ಅವನು ತನ್ನ ಗುರುವಿನ ಅನುಗ್ರಹಕ್ಕೆ ಪಾತ್ರನಾಗದಿದ್ದರೆ ಎಲ್ಲವೂ ತೃಣ ಮಾತ್ರವೇ.
ಹೀಗೆ ಮೇಲಿನ ಶ್ಲೋಕಗಳಲ್ಲಿ ನಾವು ಬದುಕಿನಲ್ಲಿ ಏನೆಲ್ಲಾ ಸಾಧಿಸಿದ್ದರೂ, ತ್ಯಜಿಸಿದ್ದರೂ, ಗುರುವಿನ ಕರುಣೆ ಯಿಲ್ಲದೆ ಎಲ್ಲವೂ ವ್ಯರ್ಥ ಎಂಬುದನ್ನು ಅರ್ಥೈಸಿಕೊಳ್ಳಬೇಕಾಗುತ್ತದೆ.

ಆದಿ ಗುರು ಶ್ರೀ ಶಂಕರಾಚಾರ್ಯರು ಹಿಂದೂ ಧರ್ಮದಪುನರ್ಸ್ಥಾಪನೆ ಮತ್ತು ಪ್ರಚಾರ ಕಾರ್ಯಕ್ಕಾಗಿಯೇ ಬಂದವರು. ಅವರು ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದರು. ನಂತರ ಬಂದವರು ಶ್ರೀ ರಾಮಾನುಜಾಚಾರ್ಯರು ಮತ್ತು ಇವರು ವಿಶಿಷ್ಟಾದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದರು. ಇವರಿಬ್ಬರ ನಂತರ ಬಂದವರು ಶ್ರೀ ಮಧ್ವಾಚಾರ್ಯರು. ಆಚಾರ್ಯ ತ್ರಯರೆಂದೇ ಗುರುತಿಸಲ್ಪಡುವರು ನಮ್ಮ ಈ ಮೂವರು ಶ್ರೇಷ್ಠ ಗುರುಗಳು. ಅದ್ವೈತ, ವಿಶಿಷ್ಟಾದ್ವೈತ ಹಾಗೂ ದ್ವೈತ ಸಿದ್ಧಾಂತಗಳನ್ನು ಅನುಸರಿಸುವ ಗುರು ಪರಂಪರೆಯೇ ಬೆಳೆಯಿತು ಮತ್ತು ಈಗಲೂ ಅನೇಕ ಶಾಖೆಗಳಾಗಿ ವಿಭಜಿತವಾಗಿದ್ದರೂ, ಪರಂಪರೆ ಮುಂದುವರೆದಿದೆ. ಈ ಪರಂಪರೆಯಲ್ಲಿ ಈಗಿರುವ ಗುರುವಿನ ಗುರುವಿಗೆ ಪರಮಗುರು ಎಂದೂ, ಪರಮ ಗುರುವಿನ ಗುರುವನ್ನು ಪರಾಪರ ಗುರು ಎಂದೂ, ಪರಾಪರ ಗುರುವಿನ ಗುರುವನ್ನು ಪರಮೇಷ್ಠಿ ಗುರು ಎಂದೂ ಗುರುತಿಸಲ್ಪಡುತ್ತಾರೆ. ಹೀಗೆ “ಗುರು ಪೂರ್ಣಿಮೆ’ಯಂದು ಸಮಸ್ತ ಗುರು ಪರಂಪರೆಯೇ ಪೂಜಿಸಲ್ಪಡುತ್ತದೆ.

ವೇದದಲ್ಲಿನ ಬ್ರಹ್ಮ ತತ್ವವನ್ನು ಅರಿತಿದ್ದ ವಿಷ್ಣುವಿನ ಅವತಾರವೆಂದೇ ಕರೆಯಲ್ಪಡುವ ಶ್ರೀ ವೇದವ್ಯಾಸರನ್ನು ನಾವು ವಿಶೇಷವಾಗಿ ನಮ್ಮ ಗುರು ಪರಂಪರೆಯ ಜೊತೆಗೇ “ಗುರು ಪೂರ್ಣಿಮೆ” ಯಂದು ಪೂಜಿಸುತ್ತೇವೆ.ಲೋಕಗುರು ಪರಮಗುರು ಎಂದೇ ಪ್ರಖ್ಯಾತರಾಗಿದ್ದರು ಶ್ರೀ ವೇದವ್ಯಾಸರು. ವೇದಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿದ್ದರಿಂದ ಇವರನ್ನು ವೇದವ್ಯಾಸರೆಂದು ಕರೆದರು. ಇಡೀ ಮಾನವ ಕುಲಕ್ಕೇ ಒಳಿತಾಗಲೆಂದು ಮತ್ತು ವೇದಗಳ ರಹಸ್ಯ ಸಾಮಾನ್ಯರೂ ಅರಿಯುವಂತಾಗ ಬೇಕೆಂದು ಅವರು ನಮಗಾಗಿ “ಮಹಾಭಾರತ”ವೆಂಬ ಲಕ್ಷ್ಯ ಶ್ಲೋಕಗಳಿರುವ “ಪಂಚಮವೇದ”ವನ್ನು ರಚಿಸಿ ಕೊಟ್ಟರು. ಜೊತೆಗೇ ಭಾಗವತವನ್ನೂ ಮತ್ತು ಹದಿನೆಂಟು ಪುರಾಣಗಳನ್ನೂ ರಚಿಸಿಕೊಟ್ಟರು. ಇಂತಹ ಪುಣ್ಯಾತ್ಮರು ವೇದವ್ಯಾಸರು.ಆದ್ದರಿಂದಲೇ ಅವರನ್ನು ಲೋಕಗುರುವೆಂದು ಕರೆದು ಶ್ರದ್ಧೆ ಹಾಗೂ ಭಕ್ತಿಯಿಂದ ಗುರು ಪೂರ್ಣಿಮೆಯಂದು ಪೂಜಿಸುತ್ತೇವೆ.

“ಗುರು” ಎನ್ನುವುದು ಒಬ್ಬ ವ್ಯಕ್ತಿ ಎಂದು ನೋಡದೆ ನಾವು ಒಂದು ಶಕ್ತಿ ಎಂದು ಅರ್ಥೈಸಿ ಕೊಂಡರೆ ನಮಗೆ ಗುರುವಿನ ಮಹತ್ವ ಇನ್ನೂ ಹೆಚ್ಚು ಆಳವಾಗಿ ತಿಳಿಯುತ್ತದೆ. ಬೇರೆ ಬೇರೆ ಗುರುಗಳು ಭೌತಿಕ ಶರೀರದಿಂದ ಅಂದರೆ ಹೊರಗಿನಿಂದ ನೋಡಲು ವ್ಯತ್ಯಾಸವಾಗಿದ್ದರೂ ಅವರೆಲ್ಲರ ಒಳಗಿನ “ಗುರು ತತ್ವ” ಮಾತ್ರ ಒಂದೇ ಆಗಿರುತ್ತದೆ. ಅವೆರೆಲ್ಲರೂ ಹೊರ ಹೊಮ್ಮಿಸುವ, ಪಸರಿಸುವ ಲಹರಿಗಳು ತುಂಬಾ ಚೈತನ್ಯದಾಯಕವಾಗಿರುತ್ತದೆ. ಗುರುವಿಗೆ ಯಾವಾಗಲೂ ಶಿಷ್ಯನ ಉನ್ನತಿಯ, ಬೆಳವಣಿಗೆಯ ಚಿಂತನೆಯೇ ಇರುತ್ತದೆ.ಗುರು ತನ್ನ ಶಿಷ್ಯನನ್ನು ತಾನೇ ಹುಡುಕಿ ಕೊಳ್ಳುತ್ತಾನೆ. ಯಾವಾತ ಗುರು ಶಿಷ್ಯ ಸಿಕ್ಕಿದ ಕ್ಷಣವೇ ಶಿಷ್ಯನ ಏಳಿಗೆಯ “ಸಂಕಲ್ಪ” ಮಾಡಿಕೊಂಡು ಬಿಟ್ಟಿರುತ್ತಾನೆಯೋ ಆತನೇ ಶ್ರೇಷ್ಠ ಗುರು ಎಂದು ಅನ್ನಿಸಿಕೊಳ್ಳುತ್ತಾನೆ.

ನಮ್ಮ ಉಪನಿಷತ್ತು, ಪುರಾಣಗಳು, ವೇದ, ಶಾಸ್ತ್ರಗಳೆಲ್ಲದರಲ್ಲೂ ಮತ್ತು ವಿಶೇಷವಾಗಿ ಭಕ್ತಿ ಮಾರ್ಗದಲ್ಲೂ ಗುರುವಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ – ಅರ್ಜುನರ ಸಂಬಂಧ ಮತ್ತು ರಾಮಾಯಣದಲ್ಲಿ ಶ್ರೀರಾಮ – ಹನುಮರ ಸಂಬಂಧಗಳು ಗುರು – ಶಿಷ್ಯರ ಸಂಬಂಧಕ್ಕೆ ಅತಿ ಸೂಕ್ತವಾದ ನಿದರ್ಶನಗಳು.
ಯೋಗ್ಯ ಹಾಗೂ ಸದ್ಗುರುವಿನ ಪಾದಗಳಿಗೆ ಶರಣಾದರೆ ಆತ ಉಪದೇಶ ಕೊಟ್ಟು ಉದ್ಧರಿಸುತ್ತಾನೆ. ನೀನು ಹುಡುಕುತ್ತಿರುವ ಪರಶುಮಣಿ ನಿನ್ನ ಕಂಕುಳಲ್ಲೇ ಇದೆ ಎಂದು ನಮ್ಮಲ್ಲೇ ಇರುವ ದೇವರನ್ನು ತೋರಿಸುತ್ತಾನೆ, ಸಾಧನಮಾರ್ಗ ಕಲಿಸುತ್ತಾನೆ. ಅದೇ ಗುರುಮಾರ್ಗ, ಅದು ಗುರುಸೂತ್ರ, ಅದೇ ಗುರುಕೀಲು.
ನಾವು ಭಗವಂತನ ಹತ್ತಿರ “ನೀನು ಯಾವದೇ ಪರಿಸ್ಥಿತಿಯಲ್ಲಿ ನನ್ನನ್ನು ಇಡು . ಆದರೆ ನನ್ನ ಸಮಾಧಾನ ಮಾತ್ರ ಭಂಗವಾಗಗೊಡಬೇಡ . ನನ್ನ ಅಹಂಭಾವವನ್ನು ತೆಗೆದುಹಾಕು . ನಿನ್ನ ವಿಸ್ಮರಣೆಯಾಗಗೊಡಬೇಡ . ನನಗೆ ನಿನ್ನಲ್ಲಿ ಮಾತ್ರ ದೃಢವಾದ ಶ್ರದ್ಧೆಯು ಉಳಿಯುವಂತೆ ಮಾಡು .” ಎಂದು ಪ್ರಾರ್ಥನೆ ಮಾಡಬೇಕು .
ಶ್ರದ್ದೆಯ ಹೊರತಾಗಿ ಎಂದೂ ಯಾರಿಗೂ ಪರಮಾರ್ಥ ಲಭಿಸುವದಿಲ್ಲ. ಪರಮಾರ್ಥದೆಡೆಗೆ ಆಡಿಯಿಡುವ ನನ್ನ ನಡೆಗೆ ದಾರಿದೀಪವಾದ ಪರಮಗುರುವಿನ ಪಾದತಲಕೆ ನನ್ನ ಭಕ್ತಿಪೂರ್ವಕ ಅಕ್ಷರನಮನ.

ಬದುಕಿನಲಿ ರಸ ಗಳಿಗೆ ಬರುತಿರಲಿ ದಿನದಿನವು
ಅರಳುತ್ತ ಗಮಗಮಿಸೆ ಪುಷ್ಪದೊಲು ಸವಿಮನವು|
ಕಲ್ಲಿರಲಿ ,ಮುಳ್ಳಿರಲಿ, ನನ್ನ ಜೊತೆ ನೀನಿರಲು
ಬಿರುಬಿಸಿಲ ದಾರಿಯದು ನನಗೆ ತಂಬೆಲರು |
ಹೃದಯದೊಳು ಕಾಪಿಡುವೆ ನಿನ್ನ ನಾ ಜತನದಲಿ
ಆಧರಿಸಿ ಪೊರೆ ಎನ್ನ ಎಡವಿದೊಡೆ ಪತನದಲಿ||
ಎಂದಳಾ ತುಳಸಿಪ್ರಿಯೆ ಭಗವತಿ
✍️ಮಾಲತಿ. ಜಿ. ಪೈ…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page