27.3 C
Udupi
Saturday, August 30, 2025
spot_img
spot_img
HomeBlogಗಣೇಶ ಚಿಕ್ಕದಾದ ಇಲಿಯ ಮೇಲೆ ಕುಳಿತು ಸಂಚರಿಸುತ್ತಾನೆ…. ಏಕೆ?

ಗಣೇಶ ಚಿಕ್ಕದಾದ ಇಲಿಯ ಮೇಲೆ ಕುಳಿತು ಸಂಚರಿಸುತ್ತಾನೆ…. ಏಕೆ?

ಡಾ .ಸುಮತಿ ಪಿ

ಗಣೇಶ ಚೌತಿಯ ವೈಶಿಷ್ಟ್ಯ

ಗಣೇಶ ಚೌತಿಯ ವೈಶಿಷ್ಟ್ಯ

ನಮ್ಮ ಸಂಸ್ಕೃತಿಯಲ್ಲಿ ಕೆಲವೊಂದು ಹಬ್ಬಗಳನ್ನು ವಿಶಿಷ್ಟವಾಗಿ ವಿಶೇಷವಾಗಿ ಆಚರಿಸುತ್ತೇವೆ. ಅಂತಹ ಹಬ್ಬಗಳಿಗೆ ಅದರದೇ ಆದ ವಿಶೇಷವಾದ, ವಿಶಿಷ್ಟವಾದ ಹಿನ್ನೆಲೆ ಹಾಗೂ ಮಹತ್ವವಿರುತ್ತದೆ.ಹಬ್ಬಗಳು ಕೇವಲ ಆಚರಣೆಗಳಾಗಿರದೆ ಮನುಷ್ಯ ಮನುಷ್ಯರ ನಡುವೆ ಒಗ್ಗಟ್ಟು ಮತ್ತು ಭಾವೈಕ್ಯದ ಪ್ರತೀಕವಾಗಿವೆ.

ಸ್ವಾತಂತ್ರ್ಯ ಹೋರಾಟಗಾರ ಲೋಕಮಾನ್ಯ ತಿಲಕರು ಗಣೇಶ ಚತುರ್ಥಿಯನ್ನು ಬ್ರಿಟಿಷ್ ಆಡಳಿತದ ವಿರುದ್ಧ ಜನರನ್ನು ಒಗ್ಗೂಡಿಸಲು ಮತ್ತು ರಾಷ್ಟ್ರೀಯತೆಯನ್ನು ಉತ್ತೇಜಿಸಲು ಸಲುವಾಗಿ ಆಚರಣೆಯನ್ನು ಪ್ರಾರಂಭಿಸಿದರು ಎಂಬುದನ್ನು ನಾವು ಇತಿಹಾಸದಲ್ಲಿ ಓದುತ್ತೇವೆ ಅಂದಿನಿಂದ, ಇದು ಸಮುದಾಯಗಳನ್ನು ಒಗ್ಗೂಡಿಸುವ ಮತ್ತು ಹಿಂದೂ ಧಾರ್ಮಿಕ ಕಾರ್ಯಕ್ರಮವಾಗಿ ಜನಪ್ರಿಯವಾಯಿತು.

ಶ್ರಾವಣ ಮಾಸದಲ್ಲಿ ಕೃಷ್ಣಾಷ್ಟಮಿ ಮುಗಿದ ಬಳಿಕ ಭಾದ್ರಪದ ಮಾಸದ ಚತುರ್ಥಿಯಂದು ಗಣೇಶನ ಹಬ್ಬ ಬರುತ್ತದೆ.ಗಣೇಶ ಚತುರ್ಥಿಯನ್ನು ‌ ಎಲ್ಲೆಡೆಯೂ ಬಹಳ ಭಕ್ತಿ ಭಾವದಿಂದ,ವಿಜೃಂಭಣೆಯಿಂದ ಆಚರಿಸುತ್ತಾರೆ.ವಿಘ್ನೇಶ್ವರ, ವಿಘ್ನ ನಾಶಕ,ಸಂಕಷ್ಟಹರ, ಗಣನಾಯಕ, ಎಂದೆಲ್ಲಾ ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಡುವ ಗಣೇಶನನ್ನು ಅತಿ ಗೌರವದಿಂದ, ಭಕ್ತಿ ಭಾವದಿಂದ, ವಿಜೃಂಭಣೆಯಿಂದ ಪೂಜಿಸುತ್ತಾರೆ.

ಗಣಪತಿಯ ಸೃಷ್ಟಿ*
ಗಣಪತಿಯ ಸೃಷ್ಟಿಯ ಕಥೆಗಳು ಪುರಾಣಗಳಲ್ಲಿ ವಿಭಿನ್ನವಾಗಿದೆ, ಆದರೆ ಪ್ರಮುಖ ಕಥೆಯ ಪ್ರಕಾರ
ಒಂದು ದಿನ ಪಾರ್ವತಿ ದೇವಿಯು ತಾನು ಸ್ನಾನಕ್ಕೆ ಹೋಗುವ ಮೊದಲು, ತನ್ನ ಮೈಯ ಕೊಳೆಯಿಂದ ಗಣಪತಿಯನ್ನು ಸೃಷ್ಟಿಸಿದಳಂತೆ. ಪಾರ್ವತಿಯ ಮೈಯಿಂದ ಹುಟ್ಟಿದ ಗಣೇಶ, ಸ್ವರ್ಣಗೌರಿಯ ಮಾನಸ ಪುತ್ರ.ಗೌರಿ ತನ್ನ ಮೈಕೊಳೆಯಿಂದ ಆಕೃತಿಯೊಂದನ್ನು ಸೃಷ್ಟಿಸಿ ಅದಕ್ಕೆ ಜೀವವನ್ನು ತುಂಬಿ, ತನ್ನ ಅರಮನೆಯ ಕಾವಲುಗಾರನನ್ನಾಗಿ ನೇಮಿಸಿ,ಸ್ನಾನ ಮಾಡಲು ಹೋಗಿರುತ್ತಾಳೆ. ತಾಯಿಯ ಅಣತಿಯಂತೆ ಗಣಪ ಮನೆಯನ್ನು ಕಾಯುತ್ತಿರುತ್ತಾನೆ. ಶಿವನು ಮನೆಗೆ ಹಿಂತಿರುಗಿದಾಗ, ಗಣಪ ಅವನನ್ನು ತಡೆದು ಮನೆಯೊಳಗೆ ಹೋಗದಂತೆ ತಡೆಯುತ್ತಾನೆ.ಇದರಿಂದ ಕುಪಿತಗೊಂಡ ಶಿವ ತನ್ನ ತ್ರಿಶೂಲದಿಂದ ಅವನ ಶಿರವನ್ನು ಕತ್ತರಿಸುತ್ತಾನಂತೆ..ಸ್ನಾನ ಮುಗಿಸಿ ಬಂದ ಗೌರಿ ಮಗನ ಕಳೇಬರ ಕಂಡು ರೋದಿಸುತ್ತಾಳೆ. ಹೆಂಡತಿಯನ್ನು ಸಮಾಧಾನ ಪಡಿಸುವ ಸಲುವಾಗಿ ಶಿವ ತನ್ನ ಗಣಗಳನ್ನು ಕರೆದು, ಉತ್ತರ ದಿಕ್ಕಿಗೆ ಯಾರಾದರೂ ತಲೆ ಹಾಕಿ ಮಲಗಿದ್ದರೆ, ಅಂತಹವರ ತಲೆಯನ್ನು ಕತ್ತರಿಸಿ ತರುವಂತೆ ಆಜ್ಞಾಪಿಸುತ್ತಾನೆ.
ಅವರು ಉತ್ತರ ದಿಕ್ಕಿನಲ್ಲಿ ಮಲಗಿದ್ದ ಮರಿಯಾನೆ ತಲೆಯೊಂದನ್ನು ಕತ್ತರಿಸಿ ತರುತ್ತಾರೆ.ಆಮೇಲೆ ಅದನ್ನು ಗಣಪನ ಶರೀರಕ್ಕೆ ಜೋಡಿಸಿ ಜೀವ ನೀಡುತ್ತಾರಂತೆ. ಹೀಗಾಗಿ ಗಣಪ ಗಜಮುಖನಾಗಿ, ಗಣಗಳ ಅಧಿಪತಿ ಮತ್ತು ಮೊದಲ ಅಗ್ರಪೂಜೆಗೆ ಅರ್ಹನಾಗುತ್ತಾನೆ. ವಿಘ್ನ ವಿನಾಶಕ, ವಿನಾಯಕನನ್ನು ಜನರೆಲ್ಲರೂ ಭಕ್ತಿ ಗೌರವದಿಂದ ಪೂಜಿಸುತ್ತಾರೆ.

ಇನ್ನೊಂದು ಕಥೆಯಲ್ಲಿ ದೇವತೆಗಳ ಪ್ರಾರ್ಥನೆಯ ಮೇರೆಗೆ ಶಿವ ಮತ್ತು ಪಾರ್ವತಿಯರು ಕೂಡಿ ಗಣೇಶನನ್ನು ಸೃಷ್ಟಿಸಿದರು ಎಂಬ ಉಲ್ಲೇಖವಿದೆ.

ಸಂಪ್ರದಾಯದ ಪ್ರಕಾರ, ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡಬಾರದು.ಏಕೆಂದರೆ ಈ ದಿನ ಚಂದ್ರನನ್ನು ನೋಡಿದರೆ, ಅವನಿಗೆ ಅಪವಾದ ತಪ್ಪದು ಎಂದು ನಂಬಲಾಗಿದೆ.

ಗಣೇಶ ಚತುರ್ಥಿಯಂದು ಚಂದ್ರನನ್ನು ಏಕೆ ನೋಡಬಾರದು
ಹುಟ್ಟುಹಬ್ಬದ ದಿನವಾದ ಚೌತಿಯಂದು ಗಣೇಶ ಮನೆಮನೆಗೆ ತೆರಳಿ, ಎಲ್ಲರೂ ಕೊಟ್ಟ ಸಿಹಿತಿಂಡಿಗಳನ್ನು ತಿಂದು, ಡೊಳ್ಳೊಟ್ಟೆಯನ್ನು ಉಬ್ಬಿಸಿ ತನ್ನ ವಾಹನ ಇಲಿಯ ಮೇಲೆ ಸವಾರಿ ಮಾಡುತ್ತಾ ಹೋಗುತ್ತಿದ್ದಾಗ ದಾರಿಯಲ್ಲಿ ಒಂದು ಹಾವು ಹರಿದುಹೋಗುತ್ತಿರುತ್ತದೆ. ಆ ಹಾವನ್ನು ಕಂಡು ಇಲಿ ಹೆದರಿ ಎಡಹುತ್ತದೆ.ಆಗ ಇಲಿಯ ಮೇಲೆ ಕುಳಿತಿದ್ದ ಗಣೇಶನ ಕೆಳಗೆ ಬಿದ್ದು, ಹೊಟ್ಟೆಬಿರಿದು ಹೋಗುತ್ತದೆ, ದಂತ ಮುರಿಯುತ್ತದೆ.ಮನೆಮನೆಗೆಳಲ್ಲಿ ತಿನ್ನಲಾಗಿದ್ದ ಇಷ್ಟ ತಿಂಡಿಗಳೆಲ್ಲಾ ಹೊಟ್ಟೆಯಿಂದ ಹೊರಗೆ ಬೀಳುತ್ತವೆ. ಬಿದ್ದ ಗಣೇಶ ಮೇಲೆದ್ದು ಹೊಟ್ಟೆಯಿಂದ ಬಿದ್ದದ್ದನ್ನೆಲ್ಲ ತೆಗೆದು ಪುನಃ ಹೊಟ್ಟೆಗೆ ಸೇರಿಸಿ, ಮತ್ತೆ ಚೆಲ್ಲದಂತೆ ಅದೇ ಹಾವನ್ನು ಹಿಡಿದು ಹೊಟ್ಟೆಗೆ ಕಟ್ಟಿ, ಮತ್ತೆ ಸವಾರಿ ಹೊರಟನಂತೆ.

ಈ ಎಲ್ಲಾ ದೃಶ್ಯಗಳನ್ನು ಆಕಾಶದಲ್ಲಿದ್ದ ಚಂದ್ರನು ನೋಡಿ ನಕ್ಕು, ಗಣಪನ ದೊಡ್ಡ ಹೊಟ್ಟೆ,ಬೀಸಣಿಗೆಯಂತಿರುವ ಕಿವಿಗಳು, ಸೊಂಡಿಲು, ಆ ಚಿಕ್ಕ ಕಣ್ಣುಗಳ ಬಗ್ಗೆ ವ್ಯಂಗ್ಯ ಮಾಡುತ್ತನಂತೆ. ಚಂದ್ರನ ಅಪಹಾಸ್ಯವನ್ನು ಕಂಡು ಸಿಟ್ಟಿಗೆದ್ದ ಗಣೇಶ, ಚಂದ್ರನನ್ನು ಶಪಿಸಿ ಬಿಟ್ಟನಂತೆ. “ಇನ್ನು ಮುಂದೆ ನಿನ್ನನ್ನು ಯಾರೂ ಯಾವಾಗಲೂ ನೋಡದಿರಲಿ, ನೋಡಿದರೆ ಅವರ ಮೇಲೆ ಕಳ್ಳತನದ ಅಪವಾದ ಬರಲಿ” ಎಂಬ ಕಠಿಣ ಶಾಪ ನೀಡಿದನಂತೆ.
ಅಂದಿನಿಂದ ಯಾರೂ ಚಂದ್ರನನ್ನು ನೋಡದೆ, ಚಂದ್ರನು ತಮ್ಮ ಕಣ್ಣಿಗೆ ಬೀಳದ ಹಾಗೆ ಓಡಾಡುತ್ತಿದ್ದರಂತೆ. ಚಂದ್ರನಿಗೆ ಎಲ್ಲಿಯೂ ಹೋಗಲು ಆಗದೆ, ಒಬ್ಬಂಟಿ ಜೀವನ ಅವನಿಗೆ ಕಷ್ಟವಾಗತೊಡಗಿತು. ಆದಕ್ಕಾಗಿ ಚಂದ್ರನು ತಪಸ್ಸನ್ನು ಆಚರಿಸಿ ಗಣೇಶನನ್ನು ಪ್ರಸನ್ನಗೊಳಿಸಿ, ತನಗೆ ಕೊಟ್ಟ ಶಾಪವನ್ನು ಹಿಂಪಡೆಯಲು ಚಂದ್ರನು ಗಣಪತಿಯಲ್ಲಿ ಬೇಡಿದನಂತೆ ಆಗ ಗಣಪತಿ
“ನಾನು ಕೊಟ್ಟಿರುವ ಶಾಪವನ್ನು ಸಂಪೂರ್ಣವಾಗಿ ಹಿಂಪಡೆಯಲು ಸಾಧ್ಯವಿಲ್ಲ. ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಶಾಪವನ್ನು ಹಿಂಪಡೆಯಬಹುದು” ಎಂದು ಹೇಳಿ ಗಣೇಶನು, ‘ಗಣೇಶ ಚತುರ್ಥಿಯಂದು ಯಾರೂ ನಿನ್ನ ದರ್ಶನವನ್ನು ಪಡೆಯಲಾರರು ಅಂದರೆ, ಭಾದ್ರಪದ ಶುಕ್ಲಚೌತಿಯಂದು ಯಾರೂ ನಿನ್ನನ್ನು ನೋಡಬಾರದು, ನೋಡಿದರೆ ಅವರಿಗೆ ಶಾಪ ತಟ್ಟುತ್ತದೆ. ಮಾತ್ರವಲ್ಲ ಇತರ ತಿಂಗಳುಗಳ ಕೃಷ್ಣಪಕ್ಷದ ಚತುರ್ಥಿಯಂದು ನಿನ್ನನ್ನು ನೋಡಿದ ನಂತರವೇ ಎಲ್ಲರೂ ಊಟಮಾಡಲಿ ಅಂದರೆ, ಸಂಕಷ್ಟ ಚತುರ್ಥಿಯಂದು ನಿನ್ನ ದರ್ಶನವಾಗದೆ ಯಾರೂ ಭೋಜನವನ್ನು ಸ್ವೀಕರಿಸುವಂತಿಲ್ಲ’ ಎಂದು ಚಂದ್ರನಿಗೆ ನೀಡಿದ ಶಾಪವನ್ನು ಹಿಂಪಡೆದನಂತೆ. ಹಾಗಾಗಿ ಚೌತಿಯ ದಿನದಂದು ಬಾನಿನಲ್ಲಿರುವ ಚಂದ್ರಮನನ್ನು ನೋಡಬಾರದು. ನೋಡಿದರೆ ಅನಾವಶ್ಯಕ ಸುಳ್ಳು ಅಪವಾದ ಬರುತ್ತದೆ ಎಂಬ ನಂಬಿಕೆ ಇದೆ.

ಗಣಪತಿಯ ದೇಹ ರಚನೆಯ ವೈಶಿಷ್ಟ್ಯ
ಗಣಪತಿಯನ್ನು ಪಾರ್ವತಿಯು ಮೈಯ ಮಣ್ಣಿನಿಂದ ಮಾಡಿದಳು ಎಂಬ ಕಥೆ ಇದೆ.ಈ ಹಿನ್ನೆಲೆಯಲ್ಲಿ ಗಣೇಶನ ಹಬ್ಬದಂದು ಮಣ್ಣಿನಿಂದ ಮಾಡಿದ ಗಣೇಶನ ಮೂರ್ತಿಯನ್ನು ಪೂಜಿಸುತ್ತೇವೆ. ಗಜಮುಖ ಹಾಗೂ ಗಣಪತಿಯ ದೊಡ್ಡ ತಲೆ, ಅವನು ಮಹಾ ಬುದ್ಧಿಶಾಲಿ ಎಂಬುದನ್ನು ಸೂಚಿಸುತ್ತದೆ. ಆನೆಯು ಜ್ಞಾನಶಕ್ತಿ ಮತ್ತು ಕರ್ಮಶಕ್ತಿ ಎರಡನ್ನೂ ಪ್ರತಿನಿಧಿಸುತ್ತದೆ. ಗಣೇಶನನ್ನು ಪೂಜಿಸಿದಾಗ ನಮ್ಮೊಳಗಿರುವ ಈ ಗಜ ಗುಣಗಳು ಬೆಳಗಿ ನಾವು ಈ ಗುಣಗಳ ಪ್ರಯೋಜನ ಪಡೆಯುತ್ತೇವೆ.

ವಿನಾಯಕನ ಕಿವಿಗಳು ಮೊರಗಳಂತೆ ಅಗಲವಾಗಿವೆ. ಮೊರದಲ್ಲಿ ಧಾನ್ಯವನ್ನು ಕೇರುತ್ತಾರೆ, ಇದರಿಂದ ಹೊಟ್ಟು, ಕಾಳು ಬೇರೆ ಬೇರೆ ಆಗುತ್ತವೆ. ಹಾಗೆಯೇ ಗಣೇಶನು ಸತ್ಯವನ್ನೂ ಸುಳ್ಳನ್ನು ಬೇರೆಬೇರೆ ಮಾಡುತ್ತಾನೆ ಎಂಬರ್ಥ. ಅಲ್ಲದೇ ಅಗಲವಾದ ಕಿವಿಗಳು ಭಕ್ತರ ಪ್ರಾರ್ಥನೆಗಳನ್ನು ಗಮನವಿಟ್ಟು ಕೇಳುತ್ತಾನೆ ಎಂಬುದನ್ನು ತೋರಿಸುತ್ತವೆ. ಸೊಂಡಿಲು ಸದಾ ಕ್ರಿಯಾಶೀಲನಾಗಿರು ಎಂದು ಬೋಧಿಸಿದರೆ, ಏಕದಂತ ಒಂದೇ ಮನಸ್ಸಿನಿಂದ ಕೆಲಸ ಮಾಡಬೇಕು ಎಂಬುದನ್ನು ಸೂಚಿಸುತ್ತದೆ.

ಗಣೇಶನಿಗೆ ನಾಲ್ಕು ಕೈಗಳಿವೆ. ಅವನ ಬಲ ಭಾಗದ ಎರಡು ಕೈಗಳಲ್ಲಿ ಒಂದರಲ್ಲಿ ಪಾಶವಿದೆ. ಇದು ಮಹಿಮೆಯಿಂದ ಕೂಡಿದ ಪಾಶ. ಗಣೇಶ ಇದರ ಸಹಾಯದಿಂದ ತನ್ನ ಭಕ್ತರ ಮನಸ್ಸನ್ನು ಆಕರ್ಷಿಸುತ್ತಾನೆ. ಇನ್ನೊಂದು ವರದಹಸ್ತ. ಇದು ಗಣೇಶನನ್ನು ಮೊರೆ ಹೊಕ್ಕವರಿಗೆ ಭಯವಿಲ್ಲ ಎಂಬುದನ್ನು ಸೂಚಿಸುತ್ತದೆ. ಹೀಗೆಯೇ ಎಡಭಾಗದ ಎರಡು ಕೈಗಳಲ್ಲಿ ಒಂದು ಅಂಕುಶವನ್ನು ಹಿಡಿದಿದೆ. ಇದು ನಮ್ಮ ಅಜ್ಞಾನವನ್ನು ನಿವಾರಿಸುವ ಸಂಕೇತ. ಮತ್ತೊಂದು ಕೈಯಲ್ಲಿ ಮೋದಕಗಳಿಂದ ತುಂಬಿದ ಪಾತ್ರೆಯಿದೆ. ಇದು ಗಣೇಶನು ಎಲ್ಲರಿಗೂ ಸಂತೋಷವನ್ನು ಕೊಡುತ್ತಾನೆ ಎಂದು ತೋರಿಸುತ್ತದೆ. ಮತ್ತು ಅವನ ಹೊರಮುಖವಾಗಿರುವ ಕೆಳಗಿನ ಕೈಯು ನಿರಂತರವಾದ ಕೊಡುಗೆಯ ಸಂಕೇತ ಮತ್ತು ಶಿರ ಬಾಗಿಸಲು ಆಹ್ವಾನ ಕೂಡ. ಇದು ನಾವೆಲ್ಲರೂ ಒಂದು ದಿನ ಈ ಭೂಮಿಯಲ್ಲಿ ಲೀನವಾಗುತ್ತೇವೆಂಬ ಸಂಗತಿಯ ಚಿಹ್ನೆ.

ಗಣೇಶನ ದೊಡ್ಡ ಹೊಟ್ಟೆಯು ಔದಾರ್ಯವನ್ನು ಮತ್ತು ಸಂಪೂರ್ಣ ಸ್ವೀಕಾರವನ್ನು ಪ್ರತಿನಿಧಿಸುತ್ತವೆ. ಹೊಟ್ಟೆಯು ಇಡೀ ಬ್ರಹ್ಮಾಂಡವೇ ಗಣಪತಿಯಲ್ಲಿ ಅಡಗಿದೆ ಎಂಬ ಅರ್ಥವನ್ನೂ ಕೊಡುತ್ತದೆ. ಗಣೇಶನ ಮೇಲ್ಮುಖವಾಗಿರುವ ಕೈ ಅಭಯಹಸ್ತದ ಸಂಕೇತವಾಗಿದ್ದು, ’ಹೆದರದಿರು, ನಾನು ನಿನ್ನ ಜೊತೆಗಿದ್ದೇನೆ’ ಎಂದು ಅರ್ಥ ನೀಡುತ್ತದೆ. ಅವನು ತನ್ನ ಕೈಗಳಲ್ಲಿ ಅಂಕುಶ ಮತ್ತು ಪಾಶವನ್ನು ಹಿಡಿದಿದ್ದಾನೆ. ಇದು ಸ್ವ- ಜಾಗೃತಿಯ ಶಕ್ತಿ ಹಾಗೂ ನಿಯಂತ್ರಣವನ್ನು ಸೂಚಿಸುತ್ತದೆ.

ಗಣೇಶನು ಅಷ್ಟು ಚಿಕ್ಕದಾದ ಇಲಿಯ ಮೇಲೆ ಕುಳಿತು ಏಕೆ ಸಂಚರಿಸುತ್ತಾನೆ.

ಇಲಿ ಕೋಪ, ಅಹಂಕಾರ, ತನಗೇ ಎಲ್ಲ ಬೇಕು ಎಂಬ ಸ್ವಾರ್ಥ ಮುಂತಾದ ಕೆಟ್ಟ ಗುಣಗಳನ್ನು
ಸೂಚಿಸುತ್ತದೆ. ಈ ಕೆಟ್ಟ ಗುಣಗಳನ್ನು ಗಣಪತಿ ತಡೆದಿಡುತ್ತಾನೆ ಎಂಬುದನ್ನು ಗಣಪತಿ ಇಲಿಯ ಮೇಲೆ ಸವಾರಿ ಮಾಡುವುದು ತೋರಿಸಿ ಕೊಡುತ್ತದೆ.

ಇಷ್ಟೆಲ್ಲಾ ವಿಶಿಷ್ಟತೆ ಹೊಂದಿದಂತಹ ಗಣಪತಿಯನ್ನು ಭಾದ್ರಪದ ಶುಕ್ಲದ ಚೌತಿಯಂದು ಬಹಳ ವಿಜೃಂಭಣೆಯಿಂದ ಭಕ್ತಿ ಭಾವದಿಂದ ನಾವು ಪೂಜಿಸಿ ಆರಾಧಿಸುತ್ತೇವೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page