
ಬೆಂಗಳೂರು: ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಚಿತ್ರದುರ್ಗದಲ್ಲಿ ಸಂಭವಿಸಿದ ಖಾಸಗಿ ಬಸ್ ಅಗ್ನಿ ಅವಘಡ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸೂಚನೆಗಳ ಹಿನ್ನೆಲೆ ರಾಜ್ಯದ ಖಾಸಗಿ ಬಸ್ ಮಾಲೀಕರು, ಬಸ್ ಕೋಚ್ ನಿರ್ಮಾಣ ಕಂಪನಿಗಳ ಪ್ರತಿನಿಧಿಗಳು ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿ ಪ್ರಯಾಣಿಕರ ಭದ್ರತೆಗಾಗಿ ಬಸ್‌ಗಳ ಬಾಡಿ ಬಿಲ್ಡಿಂಗ್ ಹೇಗಿರಬೇಕು, ಎಷ್ಟು ಎಮರ್ಜೆನ್ಸಿ ಡೋರ್‌ಗಳನ್ನು ಹೊಂದಿರಬೇಕು ಎಂಬುದೂ ಸೇರಿದಂತೆ ಹಲವು ಅಂಶಗಳ ಕುರಿತು ಚರ್ಚೆ ನಡೆಯಿತು.
ಅಂತಿಮವಾಗಿ ಸಚಿವರು 8 ಪ್ರಮುಖ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಜಾರಿಗೊಳಿಸುವಂತೆ ನಿರ್ದೇಶನ ನೀಡಿದ್ದು ಸಭೆಯಲ್ಲಿ ಪ್ರಯಾಣಿಕರಿಗೆ ಸುರಕ್ಷತಾ ಮಾಹಿತಿ ನೀಡುವ ವಿಧಾನ, ಫೈರ್ ಎಸ್ಟಿಂಗ್ ವಿಶರ್‌ಗಳ ಅಳವಡಿಕೆ, ಎಮರ್ಜೆನ್ಸಿ ಎಕ್ಸಿಟ್ ಡೋರ್‌ಗಳ ಬಳಿ ಯುವಕರು ಹಾಗೂ ಮಧ್ಯವಯಸ್ಕರಿಗೆ ಆಸನ ವ್ಯವಸ್ಥೆ, ಎಸಿ ಬಸ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡರೆ ಅದನ್ನು ಹೇಗೆ ನಂದಿಸಬೇಕು ಎಂಬುದರ ಬಗ್ಗೆ ಚರ್ಚಿಸಲಾಯಿತು. ಜೊತೆಗೆ, ಗ್ಲಾಸ್ ಒಡೆಯಲು ಬಳಸುವ ಹ್ಯಾಮರ್‌ಗಳನ್ನು ಎಲ್ಲಿ ಇಡಬೇಕು, ಪ್ರಯಾಣಿಕರು ತುರ್ತು ಸಂದರ್ಭದಲ್ಲಿ ಜಿಗಿಯಲು ಮೆಟ್ಟಿಲುಗಳ ವ್ಯವಸ್ಥೆ, ಬೆಂಕಿ ಕಾಣಿಸಿಕೊಂಡಾಗ ಚಾಲಕ ಪ್ರಯಾಣಿಕರಿಗೆ ತಕ್ಷಣ ಅಲರಾಂ ನೀಡುವ ವ್ಯವಸ್ಥೆ ಇರಬೇಕು ಎಂದು ಸಚಿವರು ಖಾಸಗಿ ಬಸ್ ಮಾಲೀಕರು ಮತ್ತು ಬಾಡಿ ಬಿಲ್ಡಿಂಗ್ ಸಂಸ್ಥೆಗಳಿಗೆ ಖಡಕ್ ಸೂಚನೆ ನೀಡಿದರು.
ಸ್ಲೀಪರ್ ಬಸ್‌ಗಳಿಗೆ 8 ನಿಯಮಗಳ ಕಡ್ಡಾಯ ಪಾಲನೆ
- ಸ್ಲೀಪರ್ ಬಸ್‌ಗಳಲ್ಲಿ ಚಾಲಕರ ಹಿಂಭಾಗದಲ್ಲಿ ಎಮರ್ಜೆನ್ಸಿ ಡೋರ್ ತೆರೆಯುವ ವ್ಯವಸ್ಥೆ ಇರಬೇಕು.
- ಸ್ಲೀಪರ್ ಬಸ್ ಗಳಲ್ಲಿ ಸ್ಲೈಡರ್ ತೆರೆಯುವ ವ್ಯವಸ್ಥೆ ಕಡ್ಡಾಯ.
- ಫೈರ್ ಡಿಟೆಕ್ಷನ್ ವ್ಯವಸ್ಥೆಯನ್ನು ಒಂದು ತಿಂಗಳೊಳಗೆ ಅಳವಡಿಸಬೇಕು.
- ಕನಿಷ್ಠ 10 ಕೆಜಿ ತೂಕದ ಅಗ್ನಿ ಶಾಮಕ ಸಾಧನ ಅಳವಡಿಕೆ ಅನಿವಾರ್ಯ.
- ಚಾಸಿಸ್‌ನ್ನು ಅನಧಿಕೃತವಾಗಿ ವಿಸ್ತರಿಸುವುದಕ್ಕೆ ಸಂಪೂರ್ಣ ನಿರ್ಬಂಧ.
- ಅನುಮೋದಿತ ಟೆಸ್ಟಿಂಗ್ ಏಜೆನ್ಸಿಯಿಂದ ಪ್ರಮಾಣಪತ್ರ ಪಡೆಯುವುದು ಕಡ್ಡಾಯ.
- ಪ್ರಯಾಣಿಕರ ಸುರಕ್ಷತಾ ಮಾನದಂಡಗಳು ಪೂರೈಸಿದರೆ ಮಾತ್ರ ಫಿಟ್ನೆಸ್ ಪ್ರಮಾಣಪತ್ರ (ಎಫ್‌ಸಿ) ನೀಡಬೇಕು.
- ಬಸ್ ಕವಚ ನಿರ್ಮಾಣ ಸಂಸ್ಥೆಯ ಸಿಂಧುತ್ವ ಪರಿಶೀಲಿಸಿದ ಬಳಿಕವೇ ಬಸ್ ನೋಂದಣಿಗೆ ಅನುಮತಿ ನೀಡಬೇಕು.








