
ಬೆಂಗಳೂರು: ಬುಧವಾರ ಗೃಹ ಸಚಿವ ಜಿ. ಪರಮೇಶ್ವರ್ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಖಮೇನಿ ಸಾವಿಗೆ ಸಂಬಂಧಿಸಿ ನಗರದಲ್ಲಿ ನಡೆದ ಪ್ರತಿಭಟನೆಗೆ ಯಾವುದೇ ಅನುಮತಿ ನೀಡಲಾಗಿಲ್ಲ. ಪ್ರತಿಭಟನಾಕಾರರು ಮುಂಚಿತವಾಗಿ ಮನವಿ ಸಲ್ಲಿಸದ ಕಾರಣ ಅವರ ವಿರುದ್ಧ ಪ್ರಕರಣ ದಾಖಲಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಅಲ್ಪಸಂಖ್ಯಾತರು ಖಮೇನಿ ಅವರನ್ನು ಗೌರವಿಸುತ್ತಿದ್ದರಿಂದ ಅವರ ಸಾವಿಗೆ ದುಃಖ ವ್ಯಕ್ತಪಡಿಸಿದ್ದಾರೆ. ಆದರೆ ಯಾವುದೇ ಪ್ರತಿಭಟನೆ ದೇಶದ ಕಾನೂನಿನಡಿ ನಡೆಯಬೇಕು.
ಸ್ವಾತಂತ್ರ್ಯ ಉದ್ಯಾನದಲ್ಲಿ ಮಾತ್ರ ಧರಣಿಗೆ ಅವಕಾಶವಿದ್ದು, ಮಂಗಳವಾರ ನಡೆದ ಪ್ರತಿಭಟನೆಗೆ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಇನ್ನೂ ಮಾತನಾಡಿದ ಅವರು, ಇತ್ತೀಚೆಗೆ ಮನರೇಗಾ ಉಳಿಸುವ ಹೋರಾಟದ ಸಂದರ್ಭದಲ್ಲಿ ಕೂಡ ನಿಯಮಗಳನ್ನು ಪಾಲಿಸಲಾಗಿತ್ತು. ಎಸ್ಐಆರ್ ಪ್ರಕ್ರಿಯೆ ನಡೆಯುವ ವೇಳೆ ಕೂಡ ಈ ವಿಷಯವನ್ನು ತಿಳಿಸಲಾಗಿತ್ತು. ಈ ಬಗ್ಗೆ ರಾಹುಲ್ ಗಾಂಧಿ ಅವರಿಗೂ ನಿಯಮಗಳ ಕುರಿತು ಮಾಹಿತಿ ನೀಡಲಾಗಿತ್ತು. ನಾವು ಬೀದಿಗಿಳಿದು ಹೋರಾಟ ನಡೆಸಿರಲಿಲ್ಲ ಎಂದರು.






