ಆರ್ ಎಸ್ ಎಸ್ ಕುರಿತು ಶುಭದ ರಾವ್ ಟೀಕೆಗೆ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಆಕ್ರೋಷ

ಜಿಹಾದಿ ಮನಸ್ತಿತಿ ಸಂಘಟನೆಗಳಿಗೆ ಬೆಂಬಲ ಕೊಟ್ಟು ರಾಷ್ಟ್ರೀಯ ಚಿಂತನೆಯ ಸಂಘಟನೆಗೆ ವಿರೋಧ ಮಾಡುವುದು ಕಾಂಗ್ರೆಸ್ ಸಿದ್ಧಾಂತ. ಇದೇ ಮಾನಸಿಕತೆಯಲ್ಲಿ ಇರುವ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಅವರ ನಾಲಗೆಯಿಂದ ದೇಶಪ್ರೇಮಿ ಸಂಘಟನೆ ಆರ್ ಎಸ್ ಸ್ಎಸ್ ಕುರಿತು ಲಘು ಮಾತುಗಳು ಹೊರಬಿದ್ದಿದೆ.
ಕೈಯಲ್ಲಿ ತಲವಾರು, ಗನ್, ಕಲ್ಲು ಹಿಡಿದುಕೊಂಡವರ ಬಗ್ಗೆ ಮಾತನಾಡಲು ಧಮ್ ಇಲ್ಲದ ಇವರ ಕಣ್ಣಿಗೆ ಆರೆಸ್ಸೆಸ್ ನ ಲಾಠಿ, ಹಿಂಸೆಗೆ ಪ್ರಚೋದಕವಾಗಿ ಕಂಡಿರುವುದು ದುರಾದೃಷ್ಟಕರ ಎಂದಿದೆ. ಭಕ್ತಿ ಆಧರಿಸುವ ಮತ್ತು ಶಕ್ತಿ ಆರಾಧಿಸುವ ದೇಶ ಭಾರತ. ಅದೇ ಆಧಾರದಲ್ಲಿ ಪ್ರತಿ ವ್ಯಕ್ತಿಯಲ್ಲಿ ದೇಶ ಭಕ್ತಿಯನ್ನು ಉದ್ದೀಪನಗೊಳಿಸುವ ಮತ್ತು ದೈಹಿಕ, ಮಾನಸಿಕ ಶಕ್ತಿ-ಸಾಮಥ್ರ್ಯವನ್ನು ಬೆಳೆಸುವ ಕಾರ್ಯದಲ್ಲಿ ಆರೆಸ್ಸೆಸ್ ಶತ ವರ್ಷಗಳಿಂದ ತೊಡಗಿಸಿಕೊಂಡಿದೆ. ನಮ್ಮ ದೇವರು-ದೇವತೆಗಳ ಕೈಯಲ್ಲಿರುವ ಆಯುಧಗಳು ಶಕ್ತಿಯ ಸಂಕೇತ. ಶಿಷ್ಟರ ರಕ್ಷಣೆ,ದುಷ್ಟರ ದಮನದ ಸೂಚಕವೂ ಹೌದು. ಆ ಶಕ್ತಿ ಸಂಕೇತಗಳು ನಮ್ಮ ಆತ್ಮಶಕ್ತಿ ಬೆಳೆಸುವುದಕ್ಕೂ ಕಾರಣ ಆಗುತ್ತವೆ. ಇದೆಲ್ಲದರ ಸಂಜ್ಞೆ ಅಥವಾ ಸಂಕೇತ ನಮ್ಮ ರಕ್ಷಣೆಯೇ ಹೊರತು ಬೇರೆಯವರ ಮೇಲೆ ದಾಳಿ ಮಾಡುವ ಉದ್ದೇಶವಲ್ಲ. ಆರೆಸ್ಸೆಸ್ ಸ್ವಯಂಸೇವಕರು ಬಳಸುವ ಲಾಠಿ ಕೂಡ ಆತ್ಮಸ್ಥೈರ್ಯ ಹೆಚ್ಚಿಸುವ, ಆತ್ಮರಕ್ಷಣೆ ಮಾಡುವ ಕಲೆಯನ್ನು ಕಲಿಸುವ ಉದ್ದೇಶವೇ ಹೊರತು ದೊಂಬಿ ಮಾಡುವ ಉದ್ದೇಶದ್ದಲ್ಲ, ನೂರು ವರ್ಷದಲ್ಲಿ ಅಂತಹ ಒಂದೇ ಒಂದು ಉದಾಹರಣೆಯೂ ದೇಶದಲ್ಲಿ ಸಿಗುವುದಿಲ್ಲ. ಇದನ್ನು ಕುಹಕವಾಡುವ ಹೀನ ಮನೊಭಾವ ಕಾಂಗ್ರೆಸಿನದ್ದು.
ಸ್ವಾತಂತ್ರ್ಯದ ಹೊಸ್ತಿಲಲ್ಲಿ ಕಾಂಗ್ರೆಸ್ ಪಕ್ಷ ಸೇವಾದಳ ಸಂಘಟನೆ ಆರಂಭಿಸಿದ್ದಕ್ಕೂ ಆರೆಸ್ಸೆಸ್ ಮಾದರಿ ಆಗಿತ್ತು. ಆದರೆ ಇಂದು ಅದೇ ಸೇವಾ ದಳದ ಕತೆ ಏನಾಗಿದೆ? ಎಂಬುದನ್ನು ಶುಭದ ರಾವ್ ಸಹಿತ ಕಾಂಗ್ರೆಸ್ ನಾಯಕರು ಮೊದಲು ಅರಿತು ಬಳಿಕ ಆರ್ ಎಸ್ ಎಸ್ ಬಗ್ಗೆ ಮಾತಾಡಲಿ. ಆರೆಸ್ಸೆಸ್ ದೂಷಿಸುವವರು, ನಿರ್ಭಂಧಿಸಲು ಹವಣಿಸುವವರು ಆ ಬಗ್ಗೆ ಯೋಚನೆ ಮಾಡುವುದು ಒಳಿತು ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಕಿಡಿ ಕಾರಿದ್ದಾರೆ.



















































