
ಕಾರ್ಕಳ: ನವೆಂಬರ್ 17ರಂದು ಕಾರ್ಕಳ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿದ್ದ ಡಿ. ಆರ್ ರಾಜು ಅವರ ಪ್ರಥಮ ವರ್ಷದ ಪುಣ್ಯ ಸ್ಮರಣೆಯ ಪ್ರಯುಕ್ತ ಕಾರ್ಕಳ ಬಿಲ್ಲವ ಸಮಾಜ ಸೇವಾ ಸಂಘದ ಶ್ರೀ ನಾರಾಯಣಗುರು ವಾಣಿಜ್ಯ ಸಂಕೀರ್ಣದ ಶ್ರೀ ಡಿ. ಆರ್ ರಾಜು ಸ್ಮೃತಿ ಭವನವನ್ನು ಶಾಸಕ ವಿ.ಸುನಿಲ್ ಕುಮಾರ್ ಅವರು ಉದ್ಘಾಟಿಸಿದರು.
ಉದ್ಘಾಟನೆ ಬಳಿಕ ಮಾತನಾಡಿದ ಶಾಸಕ ಸುನಿಲ್ ಕುಮಾರ್ ‘ನೂರಾರು ಸಮಾಜಮುಖಿ ಕೆಲಸಗಳನ್ನು ಮಾಡಿದಂತಹ ರಾಜಣ್ಣ ನಮ್ಮನ್ನು ಅಗಲಿ ಒಂದು ವರ್ಷ ಆಗಿದೆ ಎಂಬುದು ನಂಬಲು ಅಸಾಧ್ಯ. ಅವರ ಉಪಸ್ಥಿತಿಯ ಕೊರತೆಯನ್ನು ನಾವು ದೊಡ್ಡ ಪ್ರಮಾಣದಲ್ಲಿ ಅನುಭವಿಸುತ್ತಿದ್ದೇವೆ. ಅವರೇ ನಿರ್ಮಾಣ ಮಾಡಿದ್ದಂತಹ ವಾಣಿಜ್ಯ ಸಂಕೀರ್ಣಕ್ಕೆ ಇಂದು ಅವರ ಪುಣ್ಯಸ್ಮರಣೆಯ ಸಂದರ್ಭದಲ್ಲಿ ಅವರದೇ ಹೆಸರಿಟ್ಟು ಗೌರವ ಸಲ್ಲಿಸುವ ಮೂಲಕ ರಾಜಣ್ಣನ ಹೆಸರನ್ನು ಮತ್ತಷ್ಟು ಚಿರಸ್ಥಾಯಿಗೊಳಿಸಲಾಗುತ್ತಿದೆ ಎಂದು ಹೇಳಿದರು.
ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಪ್ರಮಲ್ ಕುಮಾರ್ ಮಾತನಾಡಿ 20 ವರ್ಷಗಳ ಕಾಲ ನಮ್ಮ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ರಾಜಣ್ಣನವರ ಅವಧಿ ಅದೊಂದು ಯುಗವಾಗಿತ್ತು. ಅವರ ಕೊಡುಗೆ ಕೇವಲ ಕಾರ್ಕಳಕ್ಕೆ ಮಾತ್ರ ಸೀಮಿತವಾಗಿರದೆ ರಾಜ್ಯದ ವಿವಿಧೆಡೆ ಮಾತ್ರವಲ್ಲದೆ ಮುಂಬೈಯಲ್ಲೂ ಬಿಲ್ಲವ ಸಮುದಾಯದ ಜೊತೆಗೆ ವಿವಿಧ ಸ್ಥಳದ ಜನತೆಯ ಏಳಿಗೆಗಾಗಿ ಶ್ರಮಿಸಿದ್ದರು. ಅವರ ನೆನಪು ಸದಾ ಉಳಿಯಬೇಕೆಂಬ ಉದ್ದೇಶದಿಂದ ಬಿಲ್ಲವ ಸಂಘದ ವಾಣಿಜ್ಯ ಸಂಕೀರ್ಣಕ್ಕೆ ಇಂದು ಅವರ ಹೆಸರಿಡಲಾಗಿದೆ ಎಂದು ಹೇಳಿದರು.






