ಸದನದಲ್ಲಿ ಪ್ರತಿಧ್ವನಿಸಿದ ಕಾರ್ಕಳದ ಧ್ವನಿ,ಅಲ್ಪಸಂಖ್ಯಾತರ ಇಲಾಖೆಯಿಂದ ಸ್ಪಂದನೆ
ಮೊದಲ ಹಂತವಾಗಿ 1.59 ಕೋಟಿ ರೂ. ಅನುದಾನ ಬಿಡುಗಡೆ

ಕಾರ್ಕಳ: ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಕಾರ್ಕಳ ಐತಿಹಾಸಿಕ ಶ್ರೀ ಗೊಮ್ಮಟೇಶ್ವರ ಸ್ವಾಮಿಯ ಮಹಾಮಸ್ತಕಾಭಿಷೇಕ ಮಹೋತ್ಸವ ಕಾರ್ಯಕ್ರಮಕ್ಕೆ, ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್ ಸಿಎಂ ಬಳಿ ಮನವಿ ಸಲ್ಲಿಸಿದ್ದು ಅಲ್ಲದೆ, ಸದನದಲ್ಲೂ ಕೂಡ ಧ್ವನಿಯಾಗಿದ್ದರು.
ಇದೀಗ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಕಾರ್ಕಳ ಬಾಹುಬಲಿ ಸ್ವಾಮಿಯ ಮಜ್ಜನದ ಅಂಗವಾಗಿ ಅಟ್ಟಳಿಗೆ ನಿರ್ಮಾಣಕ್ಕೆ 50 ಲಕ್ಷ ರೂ. ಅನುದಾನ ಬಿಡುಗಡೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ ಮೊದಲ ಹಂತದ 1.19 ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಂಡಿದೆ ಎಂದು ಶಾಸಕ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ.
ಶ್ರೀ ಭಗವಾನ್ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಅಂಗವಾಗಿ, ಕಾರ್ಕಳ ಶಾಸಕ ಮನವಿಯ ಮೇರೆಗೆ ಇಲಾಖೆಯಿಂದ 1.19 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದ್ದು, ಜೈನ ಮಠದ ಆವರಣದಲ್ಲಿರುವ ತ್ಯಾಗಿ ಭವನ ಹಾಗೂ ಮಾತಾಜಿ ಭವನದ ನವೀಕರಣಕ್ಕಾಗಿ 63.75 ಲಕ್ಷ ರೂ. ಜೈನ ಮಠದ ಸಭಾಂಗಣದ ನವೀಕರಣಕ್ಕೆ 8.25 ಲಕ್ಷ ರೂ. ಹಾಗೂ ಗೊಮ್ಮಟೇಶ್ವರ ಬೆಟ್ಟಕ್ಕೆ ನಿರಂತರ ನೀರು ಸರಬರಾಜು ಮತ್ತು ಹೊಸ ಕೊಳವೆ ನಿರ್ಮಾಣಕ್ಕಾಗಿ 9.75 ಲಕ್ಷ ರೂಪಾಯಿಗಳನ್ನು ವಿನಿಯೋಗಿಸಲಾಗುವುದು ಎಂದು ಶಾಸಕ ವಿ. ಸುನಿಲ್ ಕುಮಾರ್ ಮಾಹಿತಿ ಹಂಚಿಕೊಂಡಿದ್ದಾರೆ.
























































