
ಕಾರ್ಕಳ :ಮಾಳ ಗ್ರಾಮದ ಮಾಳ ಮಲ್ಲಾರು ಚೆಕ್ ಪೋಸ್ಟ್ ನಿಂದ ಶೃಂಗೇರಿಗೆ ಹೋಗುವ ರಾಷ್ಟೀಯ ಹೆದ್ದಾರಿಯಲ್ಲಿ ಸುಮಾರು ಐದು ಕಡೆಯಲ್ಲಿ ಗುಡ್ಡಜರಿದು ಮಣ್ಣು ರಸ್ತೆಗೆ ಬಂದಿರುತ್ತದೆ. ಹಾಗೂ ಮರ ರಸ್ತೆಗೆ ಬಿದ್ದಿದ್ದನ್ನು ಈಗಾಗಲೇ ಅರಣ್ಯ ಇಲಾಖೆಯವರ ಸಹಕಾರದಿಂದ ತೆರವುಗೊಳಿಸಲಾಗಿದ್ದು, ಸಂಚಾರಕ್ಕೆ ಅನುವು ಮಾಡಿಕೊಳ್ಳಲಾಗಿದೆ.

ನಿರಂತರ ಗಾಳಿ ಮಳೆಯಿಂದಾಗಿ ಮಾಳ-ಎಸ್.ಕೆ ಬಾರ್ಡರ್ ರಸ್ತೆ, ಮಲ್ಲಾರು ಚೆಕ್ ಪೋಸ್ಟ್ ನ ಸಮೀಪ ಮಣ್ಣು ಜರಿಯುತ್ತಿದ್ದು ಸೋಮವಾರ ಮಧ್ಯಾಹ್ನದ ನಂತರ ಮಳೆ ನೀರಿನ ಒರತೆ ಹೆಚ್ಚಿದ್ದರಿಂದ ಕೆಲವು ಕಡೆಗಳಲ್ಲಿ ಭೂಕುಸಿತ ಉಂಟಾಗಿ ಸಂಚಾರಕ್ಕೆ ಧಕ್ಕೆಯಾಗಿದೆ.
ಇಕ್ಕಟ್ಟಾದ ರಸ್ತೆಯಲ್ಲಿ ಮಣ್ಣು, ಕಲ್ಲು, ಬಂಡೆ ಸಹಿತ ರಸ್ತೆಗೆ ಜರಿದಿದ್ದು ಕೆಲವು ಕಡೆಗಳಲ್ಲಿ ಮರ ಸಮೇತ ಮಣ್ಣು ರಸ್ತೆಗೆ ಜರಿದಿದ್ದು ಅರಣ್ಯ ಇಲಾಖೆಯು ತೆರವು ಕಾರ್ಯ ನಡೆಸಿದೆ. ಕಂದಾಯ ಇಲಾಖೆ, ಅರಣ್ಯ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.






















































