
ಗಣಿತನಗರ : ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ಗಣಿತನಗರ ಇಲ್ಲಿ ಗಣಿತ ತಜ್ಞ ಶ್ರೀನಿವಾಸ್ ರಾಮಾನುಜನ್ ಜನ್ಮದಿನವಾದ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಇದೇ ಸಂದರ್ಭ ನಿವೃತ್ತ ಯೋಧ ಪ್ರವೀಣ್ ಶೆಟ್ಟಿ ಮತ್ತು ಭಾರತದ ವಾಲಿಬಾಲ್ ತಂಡದ ನಾಯಕಿ ಕು.ಶಗುನ್ ವರ್ಮ ಹೆಗ್ಡೆಯವರನ್ನು ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಪರವಾಗಿ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ವತಿಯಿಂದ ಗೌರವಿಸಲಾಯಿತು. ನಿವೃತ್ತ ಯೋಧ ಪ್ರವೀಣ್ ಶೆಟ್ಟಿ ಮಾತನಾಡಿ ಯಾರು ತಂದೆ–ತಾಯಿ, ಗುರು-ಹಿರಿಯರನ್ನು ಗೌರವಿಸುವವರು
ದೇಶವನ್ನು, ವೀರಯೋಧರನ್ನು ಗೌರವಿಸುತ್ತಾರೆ. ವಿದ್ಯಾರ್ಥಿದೆಸೆಯಲ್ಲಿಯೇ ದೇಶಾಭಿಮಾನ ಬೆಳೆಸಬೇಕೆಂದು ಕರೆಕೊಟ್ಟರು.
ಗಣಿತದಿನಾಚರಣೆಯ ಶುಭಸಂದರ್ಭ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ, ಕಾರ್ಕಳ ಶ್ರೀಭುವನೇಂದ್ರ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಬಿ ಪದ್ಮನಾಭ ಗೌಡರವರು ಮಾತನಾಡಿ, ಭಾರತದ ಖ್ಯಾತ ಗಣಿತಶಾಸ್ತ್ರಜ್ಞ ಆರ್ಯಭಟ, ಬ್ರಹ್ಮಗುಪ್ತ, ಶ್ರೀಧರ, ಭಾಸ್ಕರ- ೨, ಸಿ.ಆರ್ ರಾವ್, ಡಾ.ಕಪ್ರೇಕರ್, ಹರಿಶ್ಚಂದ್ರ, ನರೇಂದ್ರ ಕರ್ಮರ್‌ಕರ್ ಇವರು ಗಣಿತಶಾಸ್ತ್ರಕ್ಕೆ ಅಪೂರ್ವವಾದ ಕೊಡುಗೆ ನೀಡಿದ್ದಾರೆ. ಶ್ರೀನಿವಾಸ ರಾಮಾನುಜನ್ ಭಾರತದ ಮಹಾನ್ ಗಣಿತ ಶಾಸ್ತçಜ್ಞರಾಗಿದ್ದು ಸಂಖ್ಯಾ ಸಿದ್ಧಾಂತ (ನಂಬರ್ ಥಿಯರಿ), ಅನಂತ ಸರಣಿ (ಇನ್ಫಿನಿಟಿ ಸಿರಿಸ್) ಮತ್ತು ಕಾರ್ಯಗಳ ವಿಶ್ಲೇಷಣೆ(ಅನಾಲಿಸಿಸ್ ಆಫ್ ಫಂಕ್ಷನ್ಸ್)ಯಲ್ಲಿ ಅಪೂರ್ವ ಕೊಡುಗೆಗಳನ್ನು ನೀಡಿದ್ದಾರೆ ಎಂದು ಅವರ ಜೀವನ ಸಾಧನೆಯನ್ನು ಸವಿಸ್ತಾರವಾಗಿ ತೆರೆದಿಟ್ಟರು.
ಕಾರ್ಯಕ್ರಮದಲ್ಲಿ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ ಟ್ರಸ್ಟಿನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಪ್ರಾಸ್ತಾವಿಕ ನುಡಿಗಳಾನ್ನಾಡಿದರು. ಇದೇ ಸಂದರ್ಭ ಸಂಸ್ಥೆಯ ವತಿಯಿಂದ ಪ್ರೊ.ಬಿ.ಪದ್ಮನಾಭ ಗೌಡರವರನ್ನು ಸನ್ಮಾನಿಸಲಾಯಿತು. ಗಣಿತ ವಿಭಾಗದ ಬೋಧಕ ವರ್ಗವು ಜೊತೆಗೂಡಿದ್ದರು.
ಟ್ರಸ್ಟಿಗಳಾದ ಅನಿಲ್ ಕುಮಾರ್ ಜೈನ್, ವಿದ್ಯಾವತಿ ಎಸ್ ಶೆಟ್ಟಿ, ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಿ.ಇ.ಒ ಹಾಗೂ ಪ್ರಾಂಶುಪಾಲ ದಿನೇಶ್ ಎಂ ಕೊಡವೂರ್ ಉಪಸ್ಥಿತರಿದ್ದರು. ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಪ್ರಜ್ವಲ್ ಕುಲಾಲ್ ನಿರೂಪಿಸಿ ವಂದಿಸಿದರು.





