
ಕಾರ್ಕಳ: ನಗರದ ಆನೆಕೆರೆ–ಪುಲ್ಕೇರಿ ಬೈಪಾಸ್ ಸಂಪರ್ಕ ರಸ್ತೆಯಲ್ಲಿ ಅಭಿವೃದ್ಧಿ ಕಾಮಗಾರಿ ಮುಂದುವರಿಯುತ್ತಿದ್ದು, ಮೋರಿಯ ನಿರ್ಮಾಣ ಕಾರ್ಯ ನಡೆಯುತ್ತಿದೆ. ಆದರೆ ಈ ಸ್ಥಳದಲ್ಲಿ ಯಾವುದೇ ಮುನ್ನೆಚ್ಚರಿಕಾ ಫಲಕಗಳನ್ನು ಅಳವಡಿಸದಿರುವುದರಿಂದ ಅಪಘಾತಗಳು ಮರುಮರು ಸಂಭವಿಸುತ್ತಿರುವುದು ಗಮನಕ್ಕೆ ಬಂದಿದೆ.
ಶನಿವಾರ ಮುಂಜಾನೆ ಕಾರ್ಕಳದಿಂದ ಬೈಪಾಸ್ ದಿಕ್ಕಿಗೆ ಸಾಗುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮೋರಿಗೆ ಡಿಕ್ಕಿಯಾಗಿದೆ.ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರ ಬಗ್ಗೆ ತಿಳಿಯದೇ ವೇಗವಾಗಿ ಬಂದ ಕಾರು ಚಾಲಕ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡು, ನಿರ್ಮಾಣ ಹಂತದಲ್ಲಿದ್ದ ಮೋರಿಗೆ ಹೊಡೆದಿದೆ. ಪರಿಣಾಮವಾಗಿ ಕಾರಿನ ಮುಂಭಾಗಕ್ಕೆ ಹಾನಿಯಾಗಿದೆ. ಈ ಪ್ರದೇಶದಲ್ಲಿ ವಾಹನ ಸಂಚಾರ ಹೆಚ್ಚು ವೇಗದಲ್ಲಿ ನಡೆಯುತ್ತಿರುವುದರಿಂದ, ತಕ್ಷಣ ಬ್ಯಾರಿಕೇಡ್ಗಳು ಮತ್ತು ಎಚ್ಚರಿಕೆ ಫಲಕಗಳನ್ನು ಅಳವಡಿಸಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.









