
ಕಾಪು: ಎಸ್ ಕೆಎಸ್ ಇನ್ಫ್ರಾ ಪ್ರಾಜೆಕ್ಟ್ ಪ್ರೈವೇಟ್ ಲಿ.ನ ಸುಜಯ್ ಕುಮಾರ್ ಶೆಟ್ಟಿ ಅವರು ಕಾಪು ಶ್ರೀ ಹೊಸ ಮಾರಿಗುಡಿಯ ಜೀರ್ಣೋದ್ಧಾರ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿದ್ದು, ಇದೀಗ ಅವರು ದೇವಸ್ಥಾನದ ಉಸ್ತುವಾರಿಯನ್ನು ಫೆ.25ರಂದು ದೇವಸ್ಥಾನ ಅಭಿವೃದ್ಧಿ ಸಮಿತಿ ಮತ್ತು ಆಡಳಿತ ಮಂಡಳಿಯವರಿಗೆ ಹಸ್ತಾಂತರಿಸಿದ್ದಾರೆ.
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಬ್ರಹ್ಮಕಲಶೋತ್ಸವವು ಫೆಬ್ರವರಿ 25 ರಿಂದ ಮಾರ್ಚ್ 5 ರವರೆಗೆ ವಿಜೃಂಭಣೆಯಿಂದ ನಡೆಯಲಿದೆ.ದೇವಸ್ಥಾನಕ್ಕೆ ಕೆಸರು ಕಲ್ಲು ಹಾಕಿದ ಬಳಿಕ ಕಾಮಗಾರಿಯ ಸಂಪೂರ್ಣ ಉಸ್ತುವಾರಿಯನ್ನು ಗುತ್ತಿಗೆದಾರರು ವಹಿಸಿಕೊಂಡು ಬ್ರಹ್ಮಕಲಶೋತ್ಸವಕ್ಕೆ ಪೂರ್ವಭಾವಿಯಾಗಿ ದೇವಸ್ಥಾನದ ಕಾಮಗಾರಿ ಪೂರ್ಣಗೊಳಿಸಿ ಆಡಳಿತ ಮಂಡಳಿಯವರಿಗೆ ಉಸ್ತುವಾರಿಯನ್ನು ಬಿಟ್ಟು ಕೊಡುವುದು ಸಂಪ್ರದಾಯವಾಗಿದ್ದು, ಅದರಂತೆ ಮಂಗಳವಾರ ಬೆಳಿಗ್ಗೆ ಹೊಸ ಮಾರಿಗುಡಿಯಲ್ಲಿ ತಂತ್ರಿಗಳ ಸಮ್ಮುಖದಲ್ಲಿ ಹಸ್ತಾಂತರ ಕಾರ್ಯ ನಡೆಸಿದರು.
ಈ ಕಾರ್ಯಕ್ರಮದಲ್ಲಿ ಸುಜಯ್ ಕುಮಾರ್ ಶೆಟ್ಟಿ ಅವರ ಪತ್ನಿ ಅಮೃತ ಎಸ್. ಶೆಟ್ಟಿ, ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.









