
ಬೆಂಗಳೂರು: ಕರ್ನಾಟಕದ ಮುಜರಾಯಿ ಇಲಾಖೆ ವ್ಯಾಪ್ತಿಯ ಇಲಾಖೆಯಡಿ 35 ಸಾವಿರ ದೇವಾಲಯಗಳಿದ್ದು, ಈ ದೇವಾಲಯಗಳ ಪೈಕಿ 9 ದೇವಸ್ಥಾನಗಳ ಸೇವಾಶುಲ್ಕ ಏರಿಕೆ ಮಾಡಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಕಳೆದ 4-5 ವರ್ಷದಿಂದ ಸೇವಾಶುಲ್ಕ ಪರಿಷ್ಕರಣೆ ಮಾಡದ, ಯಾವ ದೇವಾಲಯಗಳು ಸೇವಾಶುಲ್ಕ ಪರಿಷ್ಕರಣೆಗೆ ಮನವಿ ಸಲ್ಲಿಸಿದ್ದವೋ ಆ ದೇವಾಲಯಗಳ ಸೇವಾ ಶುಲ್ಕವನ್ನು, ಆಗಮ ಪಂಡಿತರ ಪರಿಶೀಲನೆ ನಂತರ 5-10% ವರೆಗೂ ಮುಜರಾಯಿ ಇಲಾಖೆ ಆಯುಕ್ತರು ಏರಿಕೆ ಮಾಡಿದ್ದಾರೆ. ಇದು ದೇವಾಲಯಗಳ ಆಡಳಿತ ಮಂಡಳಿ ತೀರ್ಮಾನವೇ ಹೊರತು ಸರ್ಕಾರದ ನಿರ್ಧಾರವಲ್ಲ. ಅಕ್ಟೋಬರ್ 1ರಿಂದ ಪರಿಷ್ಕೃತ ದರ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು ನಗರದ
- ಯೋಗ ನರಸಿಂಹಸ್ವಾಮಿ ದೇವಾಲಯ, ಮಲ್ಲೇಶ್ವರಂ
- ನಂದಿ ತೀರ್ಥ ದೇವಾಲಯ, ಮಲ್ಲೇಶ್ವರಂ
- ಮಹಾಗಣಪತಿ ದೇವಾಲಯ, ಮಲ್ಲೇಶ್ವರಂ
ಚಿಕ್ಕಬಳ್ಳಾಪುರದ
- ವಿಧುರಾಶ್ವಥ ನಾರಾಯಣ ಸ್ವಾಮಿ ದೇವಾಲಯ
- ವೆಂಕಟರಮಣ ದೇವಾಲಯ, ತಲಕಾಯ ಬೆಟ್ಟ
ದಕ್ಷಿಣ ಕನ್ನಡದ
- ಮಹಾಲಿಂಗೇಶ್ವರ ದೇವಾಲಯ, ಪುತ್ತೂರು
- ಕುಕ್ಕೆ ಸುಬ್ರಹ್ಮಣ್ಯ ದೇವಾಲಯ
- ಸೌತಡ್ಕ ಮಹಾಗಣಪತಿ ದೇವಾಲಯ
- ಸೂರ್ಯನಾರಾಯಣ ಸ್ವಾಮಿ ದೇವಾಲಯ, ಮಾರಾಳಿ
ಈ ಮೇಲಿನ ಎಲ್ಲಾ ದೇವಾಲಯಗಳ ಸೇವಾ ಶುಲ್ಕ ಏರಿಕೆ ಮಾಡಲಾಗಿದೆ.








