
ಬೆಂಗಳೂರು: ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಒಟ್ಟು 16 ಮಕ್ಕಳು ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಸೇವಿಸಿ ಸಾವನ್ನಪ್ಪಿದ ಬೆನ್ನಲ್ಲೇ, ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು (ಸಿಡಿಎಸ್‌ಸಿಒ) ಕರ್ನಾಟಕದಲ್ಲಿ ಮಾರಾಟವಾಗುತ್ತಿರುವ 2 ಬ್ರ್ಯಾಂಡ್‌ಗಳ ಕೆಮ್ಮಿನ ಸಿರಪ್ ಗುಣಮಟ್ಟ ಕಳಪೆಯಾಗಿದೆ ಎಂದು ಆಗಸ್ಟ್‌ನಲ್ಲೇ ವರದಿ ನೀಡಿತ್ತು ಎಂಬ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.
ಆಗಸ್ಟ್‌ನಲ್ಲೇ ವರದಿ ನೀಡಿದ್ದರೂ ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ, ಆಹಾರ ಮತ್ತು ಔಷಧ ಗುಣಮಟ್ಟ ನಿಯಂತ್ರಣ ಇಲಾಖೆಗೆ ಸ್ಪಷ್ಟ ಮಾಹಿತಿಯೇ ಇಲ್ಲ ಎಂದು ತಿಳಿಸಿದ್ದಾರೆ.
ಆಸ್ತಮಾ ಮತ್ತು ಸಿಒಪಿಡಿಯಂತಹ ಉಸಿರಾಟಕ್ಕೆ ಸಂಬಂಧಿಸಿದ ಕೆಮ್ಮು ನಿವಾರಣೆಗೆ ಹಿಮಾಚಲಪ್ರದೇಶದ ಎಲ್‌ವಿ ಲೈಫ್ ಸೈನ್ಸ್ ತಯಾರಿಸುವ ಸಿರಪ್ ಮತ್ತು ಪುದುಚೆರಿಯ ಎಥಿಡ್ರಸ್ ಸಂಶೋಧನಾ ಪ್ರಯೋಗಾಲಯ ಉತ್ಪಾದಿಸುವ ಸಿ ಆ್ಯಂಡ್ ಸಿ-ಎಲ್‌ಎಸ್ ಸಿರಪ್‌ನ್ನು ಬಳಸುತ್ತಿದ್ದು ಆದರೆ ಇವು ನಿಗದಿತ ಮಾನದಂಡಗಳನ್ನು ತಲುಪುವಲ್ಲಿ ವಿಫಲವಾಗಿವೆ. ಇವುಗಳನ್ನು ಹಿಂಪಡೆದು, ತಯಾರಿಕಾ ಘಟಕಗಳಲ್ಲಿ ಪರಿಶೀಲನೆ ನಡೆಸಬೇಕು ಹಾಗೂ ತಯಾರಕರ ವಿರುದ್ಧ ರಾಜ್ಯ ಔಷಧ ನಿಯಂತ್ರಣ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ’ ಎಂದು ಸುದ್ದಿ ಮಾಧ್ಯಮವೊಂದು ವರದಿ ಪ್ರಕಟಿಸಿದೆ.
ಆದರೆ ಈ ಕುರಿತು ಮಾತನಾಡಿದ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ, ಮಧ್ಯಪ್ರದೇಶ ಮತ್ತಿತರೆಡೆ ಮಕ್ಕಳ ಸಾವಿಗೆ ಕಾರಣವಾಗಿದೆ ಎನ್ನಲಾದ ಕೋಲ್ಡ್ರಿಫ್ ಕಾಫ್ ಸಿರಪ್ ನಮ್ಮ ರಾಜ್ಯಕ್ಕೆ ಪೂರೈಕೆ ಆಗಿಲ್ಲ. ಇನ್ನು, ಸಿಡಿಎಸ್‌ಸಿಒ ಆಗಸ್ಟ್‌ನಲ್ಲಿ ಕಾಫ್ ಸಿರಪ್‌ಗಳ ಕುರಿತು ವರದಿ ನೀಡಿರುವ ಬಗ್ಗೆ ಮಾಹಿತಿಯಿಲ್ಲ. ಈ ಸಂಬಂಧ ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಇನ್ನು, ಆಹಾರ ಮತ್ತು ಔಷಧ ಗುಣಮಟ್ಟ ನಿಯಂತ್ರಣ ಇಲಾಖೆ ಆಯುಕ್ತ ಕೆ.ಶ್ರೀನಿವಾಸ್ ಮಾತನಾಡಿ, ನನಗೂ ಈ ಬಗ್ಗೆ ಮಾಹಿತಿಯಿಲ್ಲ. ಹಿಂದಿನ ಆಯುಕ್ತರಿಗೆ ಈ ಬಗ್ಗೆ ತಿಳಿದಿರಬಹುದು ಎಂದು ಈ ವಿಚಾರದಿಂದ ಜಾರಿಕೊಂಡರು.





















































