
ಸುಪ್ರೀಂ ಕೋರ್ಟ್ ಮಂಗಳವಾರ (ಮಾ.10) ರಂದು ಕರ್ನಾಟಕದ ಪರಂಪರೆಯ ಕ್ರೀಡೆಯಾದ ಕಂಬಳವನ್ನು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗಷ್ಟೇ ಸೀಮಿತಗೊಳಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ. ರಾಜ್ಯದ ಇತರ ಭಾಗಗಳಲ್ಲಿ ಕಂಬಳ ನಡೆಸುವುದನ್ನು ತಡೆಯುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ವಿಚಾರಣೆ ವೇಳೆ ನ್ಯಾಯಾಲಯ, ಒಂದು ಪ್ರದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ರಾಜ್ಯದ ಇತರ ಭಾಗಗಳ ಜನರಿಗೂ ಪರಿಚಯಿಸುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದು ಕೇವಲ ಒಂದು ಪ್ರದೇಶಕ್ಕೆ ಮಾತ್ರ ಸಂಸ್ಕೃತಿಯನ್ನು ಸೀಮಿತಗೊಳಿಸುವ ಅಗತ್ಯವಿಲ್ಲ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿತು.
ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಪ್ರಾಣಿ ಹಕ್ಕುಗಳ ಸಂಘಟನೆಯಾದ ಪೇಟಾ (PETA) ಸುಪ್ರೀಂ ಕೋರ್ಟ್ಗೆ ಮೊರೆ ಹೋಗಿತ್ತು. ಬೆಂಗಳೂರಿನಲ್ಲಿ ಕಂಬಳ ಆಯೋಜಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಪೇಟಾ ಪರ ವಕೀಲರು, ಇದು ಕರಾವಳಿ ಭಾಗದ ಸಂಪ್ರದಾಯವಾಗಿದ್ದು, ಬೆಂಗಳೂರಿನ ಸಂಸ್ಕೃತಿಯೊಂದಿಗೆ ಇದಕ್ಕೆ ನೇರ ಸಂಬಂಧವಿಲ್ಲ ಎಂದು ವಾದಿಸಿದ್ದರು. ಆದರೆ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಈ ವಾದವನ್ನು ಒಪ್ಪದೇ, ಸಂಸ್ಕೃತಿಕ ಪರಂಪರೆಯನ್ನು ವ್ಯಾಪಕವಾಗಿ ಹರಡುವ ಹಕ್ಕನ್ನು ಒತ್ತಿ ಹೇಳಿತು. ರಾಜ್ಯದ ಬೇರೆ ಭಾಗಗಳ ಜನರೂ ಈ ಕ್ರೀಡೆ ಹಾಗೂ ಅದರ ಹಿಂದಿರುವ ಸಂಸ್ಕೃತಿಯನ್ನು ಅರಿತುಕೊಳ್ಳಲು ಅವಕಾಶ ಇರಬೇಕು. ಇದಕ್ಕೆ ಯಾವುದೇ ತಡೆ ಇರುವ ಅಗತ್ಯವಿಲ್ಲ. ಜೊತೆಗೆ ಮುಂದಿನ ದಿನಗಳಲ್ಲಿ ಪೇಟಾ ಸಂಸ್ಥೆಗಳಿಗೂ ಕೆಲವು ಪ್ರಶ್ನೆಗಳನ್ನು ಕೇಳಬೇಕಾಗಬಹುದು ಎಂದು ಪೀಠವು ಸೂಚಿಸಿತು.
ಇದಕ್ಕೂ ಮೊದಲು ಸುಪ್ರೀಂ ಕೋರ್ಟ್ನ ಸಂವಿಧಾನ ಪೀಠವು ತಮಿಳುನಾಡಿನ ಜಲ್ಲಿಕಟ್ಟು ಮತ್ತು ಕರ್ನಾಟಕದ ಕಂಬಳದಂತಹ ಪರಂಪರೆಯ ಕ್ರೀಡೆಗಳಿಗೆ ಅವಕಾಶ ನೀಡುವ ಶಾಸನಬದ್ಧ ತಿದ್ದುಪಡಿಗಳನ್ನು ಮಾನ್ಯತೆ ನೀಡಿತ್ತು. ಈಗಿನ ತೀರ್ಪಿನ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಂಬಳ ಆಯೋಜನೆಗೆ ಇದ್ದ ಅಡ್ಡಿಗಳು ದೂರವಾದಂತಾಗಿದೆ. ಕರಾವಳಿಯ ಈ ವಿಶಿಷ್ಟ ಸಂಪ್ರದಾಯವನ್ನು ರಾಜ್ಯದ ಬೇರೆ ಭಾಗಗಳಲ್ಲೂ ಪರಿಚಯಿಸಲು ಬಯಸುವ ಕಂಬಳಾಭಿಮಾನಿಗಳು ಈ ತೀರ್ಪನ್ನು ಸ್ವಾಗತಿಸಿದ್ದಾರೆ.






