
ಮಂಗಳೂರು: ರಾಜ್ಯದಲ್ಲಿ ದಿನೇ ದಿನೇ ಬಿಸಿಲಿನ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಮತ್ತು ಗುರುವಾರ (ಮಾ.12) ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ವಾತಾವರಣ ಇನ್ನಷ್ಟು ತೀವ್ರವಾಗುವ ಸಾಧ್ಯತೆ ಇದೆ ಎಂದು India Meteorological Department ಎಚ್ಚರಿಕೆ ನೀಡಿದೆ.
ಕರಾವಳಿ ಭಾಗಗಳಲ್ಲಿ ಸಾಮಾನ್ಯ ಬೇಸಿಗೆಗಿಂತ ಹೆಚ್ಚು ಉಷ್ಣತೆ ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಜನರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ಹವಾಮಾನ ಇಲಾಖೆ ಸಲಹೆ ನೀಡಿದೆ. ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ ದಕ್ಷಿಣ ಕನ್ನಡದಲ್ಲಿ 37°C, ಕಲಬುರಗಿ ಮತ್ತು ಉತ್ತರ ಕನ್ನಡದಲ್ಲಿ 36.6°C, ಹಾವೇರಿಯಲ್ಲಿ 36.4°C ತಾಪಮಾನ ದಾಖಲಾಗಿದೆ. ಬಾಗಲಕೋಟೆ, ಬೆಳಗಾವಿ, ಶಿವಮೊಗ್ಗ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಸುಮಾರು 35°C ತಾಪಮಾನ ದಾಖಲಾಗಿದೆ. ಉಡುಪಿಯಲ್ಲಿ ಗರಿಷ್ಠ 35.8°C ತಾಪಮಾನ ಇದ್ದರೆ, ದಕ್ಷಿಣ ಕನ್ನಡದಲ್ಲಿ ಕನಿಷ್ಠ 24.6°C ಹಾಗೂ ಚಿಕ್ಕಮಗಳೂರಿನಲ್ಲಿ 16.2°C ತಾಪಮಾನ ದಾಖಲಾಗಿದೆ ಎಂದು ಇಲಾಖೆ ತಿಳಿಸಿದೆ.
ಬಿಸಿಲಿನಿಂದ ರಕ್ಷಣೆಗಾಗಿ ಸಲಹೆಗಳು:


- ಮಧ್ಯಾಹ್ನ 12ರಿಂದ 3 ಗಂಟೆಯವರೆಗೆ ಹೊರಗೆ ಹೋಗುವುದನ್ನು ತಪ್ಪಿಸುವುದು, ಸಾಕಷ್ಟು ನೀರು ಕುಡಿಯುವುದು, ಹಗುರವಾದ ಹತ್ತಿ ಬಟ್ಟೆ ಧರಿಸುವುದು, ಎಳನೀರು ಮತ್ತು ಮಜ್ಜಿಗೆಂತಹ ತಂಪು ಪಾನೀಯ ಸೇವಿಸುವುದು ಉತ್ತಮ.
- ಕಾಫಿ, ಚಹಾ ಹಾಗೂ ಹೆಚ್ಚು ಸಕ್ಕರೆ ಇರುವ ಪಾನೀಯಗಳನ್ನು ಮಿತಿಗೊಳಿಸಬೇಕು.
- ಮಕ್ಕಳು, ವೃದ್ಧರು ಮತ್ತು ಗರ್ಭಿಣಿಯರು ನೇರ ಬಿಸಿಲಿಗೆ ಹೋಗದಂತೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಲಾಗಿದೆ.







