
ಉಡುಪಿ: ಸಂಸದ ಕೋಟ ಶ್ರೀನಿವಾಸ್ ಪೂಜಾರಿಯವರು ಕರಾವಳಿ ಹಾಗೂ ಮುಂಬೈ ಬೆಸೆಯುವ ಮತ್ಸ್ಯಗಂಧ ರೈಲಿಗೆ ಉತ್ತಮ ಕೋಚ್ ಗಳನ್ನಷ್ಟೇ ಜೋಡಿಸುವಂತೆ, ಹಳೆಯ ಕೋಚ್ ಗಳನ್ನು ಅಳವಡಿಸುವ ಪದ್ಧತಿಗೆ ಮತ್ತು ಹೊಸ ಹಾಗೂ ಹಳೆ ಕೋಚ್ಗಳ ಮಿಶ್ರಣ ಮಾಡಿ ಓಡಿಸುವ ಪದ್ಧತಿಯನ್ನು ಅನುಸರಿಸದಂತೆ ಕೇಂದ್ರ ರೈಲ್ವೆ ಸಚಿವರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ.
ಮತ್ಸ್ಯಗಂಧ ರೈಲಿಗೆ 2024ರಲ್ಲಿ ತಯಾರಾದ ಹೊಸ LHB ಕೋಚ್ ಗಳ ಜೊತೆಗೆ 2020ರಲ್ಲಿ ತಯಾರಾದ ಹಳೆಯ LHB ಕೋಚ್ ಗಳನ್ನು ಸೇರಿಸುವ ಇಲಾಖೆಯ ಕಾರ್ಯವನ್ನು ಸಚಿವರ ಗಮನಕ್ಕೆ ತಂದ ಸಂಸದರು ಈ ರೈಲಿನ ಎಲ್ಲಾ ಟ್ರಿಪ್ ಗಳಿಗೂ ದೂರುಗಳು ಬಾರದಂತೆ ಉತ್ತಮ 2024ರ ಕೋಚ್ ಗಳನ್ನು ಬಳಸುವಂತೆ ಸಂಬಂಧಿಸಿದ ಜೋನಲ್ ರೈಲ್ವೆಗಳಿಗೆ ತಿಳಿಸಲು ಮನವಿ ಮಾಡಿದ್ದಾರೆ.
ಈ ಕುರಿತು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಸಚಿವರು ಮತ್ಸ್ಯಗಂಧ ರೈಲಿನ ಮೂಲ ವಲಯವಾದ ದಕ್ಷಿಣ ರೈಲ್ವೆಗೆ ತಕ್ಷಣವೇ ಈ ಸಮಸ್ಯೆ ಬಗೆಹರಿಸಲು ಸೂಚನೆ ನೀಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.