
ಉಡುಪಿ, ಎ.22: ಕೆಂಪು ಕಲ್ಲು ಗಣಿಗಾರಿಕೆಗೆ ಸಂಬಂಧಿಸಿ ಕರ್ತವ್ಯ ನಿರ್ಲಕ್ಷ್ಯ ತೋರಿಸಿದ ಆರೋಪದಲ್ಲಿ ಬೈಂದೂರು, ಗಂಗೊಳ್ಳಿ ಹಾಗೂ ಕೊಲ್ಲೂರು ಪೊಲೀಸ್ ಠಾಣೆಗಳ ಒಂಭತ್ತು ಮಂದಿ ಪೊಲೀಸ್ ಸಿಬ್ಬಂದಿಯನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ಅಮಾನತುಗೊಳಿಸಿದ್ದಾರೆ.
ಈ ಮೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆಗೆ ಸಂಬಂಧಿಸಿ ಸರಿಯಾದ ಮಾಹಿತಿ ಕಲೆ ಹಾಕುವಲ್ಲಿ ವಿಫಲರಾಗಿ, ಕರ್ತವ್ಯ ನಿರ್ಲಕ್ಷ್ಯತನ ತೋರಿದ್ದಕ್ಕಾಗಿ ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಈವರೆಗಿನ ತನಿಖೆಯಲ್ಲಿ ಈ ಪ್ರಕರಣದಲ್ಲಿ ಇವರು ಭಾಗಿಯಾಗಿರುವುದು ಕಂಡು ಬಂದಿಲ್ಲ ಎಂದು ಎಸ್ಪಿ ಡಾ.ಕೆ.ಅರುಣ್ ತಿಳಿಸಿದ್ದಾರೆ.
ಅದೇ ರೀತಿ ಈ ಪ್ರಕರಣಕ್ಕೆ ಸಂಬಂಧಿಸಿ ಬೈಂದೂರು, ಗಂಗೊಳ್ಳಿ ಹಾಗೂ ಕೊಲ್ಲೂರು ಪೊಲೀಸ್ ಠಾಣೆಗಳ ಪೊಲೀಸ್ ಉಪ ನಿರೀಕ್ಷಕರ ವಿರುದ್ಧವೂ ಇಲಾಖಾ ವಿಚಾರಣೆಗೆ ಆದೇಶ ನೀಡಲಾಗಿದೆ. ಮುಂದೆ ವರದಿಯ ಆಧಾರದಲ್ಲಿ ಅವರ ಮೇಲೂ ಕ್ರಮ ಜರುಗಿಸಲಾಗುವುದು ಎಂದು ಅವರು ಪತ್ರಿಕೆಗೆ ತಿಳಿಸಿದ್ದಾರೆ.




