“ಧರ್ಮಾಚರಣೆಯಿಂದ ಆತ್ಮಬಲ, ಆತ್ಮಬಲದಿಂದಲೇ ಧರ್ಮರಕ್ಷಣೆ” – ಸೌ. ಆಶ್ವಿನಿ ನಾಯಕ್

ಉಡುಪಿ : ಸನಾತನ ಸಂಸ್ಥೆಯ ಸೌ. ಆಶ್ವಿನಿ ನಾಯಕ್ ಇವರು ಮಾತನಾಡುತ್ತಾ, ಯತೋ ಧರ್ಮಸ್ತತೋ ಜಯಃ – ಎಲ್ಲಿ ಧರ್ಮವಿರುತ್ತದೆಯೋ, ಅಲ್ಲಿ ಜಯವಿರುತ್ತದೆ. ಕೇವಲ ಜನ್ಮತಃ ಹಿಂದೂ ಎಂದು ಕರೆಸಿಕೊಳ್ಳುವುದರಲ್ಲಿ ಸಾರ್ಥಕತೆಯಿಲ್ಲ; ನಮ್ಮ ಕರ್ಮ ಮತ್ತು ಆಚರಣೆಗಳಲ್ಲಿ ಹಿಂದುತ್ವ ಪ್ರತಿಫಲಿಸಬೇಕು. ಇಂದು ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯಿಂದಾಗಿ ನಾವು ನಮ್ಮ ಭವ್ಯ ಪರಂಪರೆಯನ್ನೇ ಮರೆಯುತ್ತಿದ್ದೇವೆ. ನಮ್ಮ ಪ್ರತಿಯೊಂದು ಹಬ್ಬ, ಸಂಪ್ರದಾಯ ಮತ್ತು ಉತ್ಸವಗಳ ಹಿಂದೆ ವೈಜ್ಞಾನಿಕವಾದ ಧರ್ಮಶಾಸ್ತ್ರ ಅಡಗಿದೆ. ಈ ಶಾಸ್ತ್ರಗಳನ್ನು ಅರಿತು, ಶ್ರದ್ಧೆಯಿಂದ ಆಚರಿಸಿದಾಗ ಮಾತ್ರ ನಮ್ಮ ಸಂಸ್ಕೃತಿ ಉಳಿಯಲು ಮತ್ತು ಬೆಳಗಲು ಸಾಧ್ಯ. ಸಂಸ್ಕೃತಿಯನ್ನು ಮರೆತ ಸಮಾಜಕ್ಕೆ ಭವಿಷ್ಯವಿಲ್ಲ; ಆದ್ದರಿಂದ ಸಂಪ್ರದಾಯದ ಹಿಂದಿನ ಸತ್ಯವನ್ನು ತಿಳಿಯೋಣ, ಕರ್ಮನಿಷ್ಠ ಹಿಂದೂಗಳಾಗೋಣ. ಧರ್ಮಶಿಕ್ಷಣವನ್ನು ಪಡೆದು ಧರ್ಮಾಚರಣೆಯಿಂದ ನಮ್ಮ ಆತ್ಮಬಲವನ್ನು ಹೆಚ್ಚಿಸಿಕೊಳ್ಳೂಣ ಎಂದು ಉಪಸ್ಥಿತರಿಗೆ ಕರೆ ನೀಡಿದರು.
“ಧರ್ಮೋ ರಕ್ಷತಿ ರಕ್ಷಿತಃ” ಎನ್ನುವಂತೆ ಧರ್ಮವನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ” : ಸಿ.ಎ. ರಘುರಾಮ್
ಕೊಕ್ಕರ್ಣೆಯ ಖ್ಯಾತ ಲೆಕ್ಕ ಪರಿಶೋಧಕರಾದ ಶ್ರೀ ಸಿ.ಎ. ರಘುರಾಮ್ ಅವರು ಮಾತನಾಡುತ್ತಾ, ಎದುರಾಳಿ ಎಷ್ಟೇ ಬಲಿಷ್ಠನಾಗಿದ್ದರೂ ಅವನು ಅಧರ್ಮದ ದಾರಿಯಲ್ಲಿದ್ದರೆ ನಾವು ಧೈರ್ಯದಿಂದ ವಿರೋಧಿಸಬೇಕು ಎಂದು ಹೇಳಿದರು. ನಾವು ಧರ್ಮದ ಹಾದಿಯಲ್ಲಿ ನಡೆಯುತ್ತಾ ಮಾನವೀಯತೆಯನ್ನು ಉಳಿಸಬೇಕು. ಅದೇ ನಿಜವಾದ ಸಮಾಜ ಧರ್ಮ ಎಂದು ಅವರು ಅಭಿಪ್ರಾಯಪಟ್ಟರು.
ಮುಂದುವರೆದು ಮಾತನಾಡಿದ ಅವರು, ರಾಷ್ಟ್ರ ನಿರ್ಮಾಣದಲ್ಲಿ ಪ್ರತಿಯೊಬ್ಬರೂ ತಮ್ಮ ಪಾತ್ರವನ್ನು ಅರಿತು ಕೈಜೋಡಿಸಬೇಕು ಎಂದು ಕರೆ ನೀಡಿದರು. ನಮ್ಮ ಬಗ್ಗೆ ನಮಗೆ ಸ್ಪಷ್ಟ ಅರಿವು ಬಂದಾಗ ಮಾತ್ರ ಸಮಾಜಕ್ಕೆ ಒಳ್ಳೆಯದು ನೀಡಲು ಸಾಧ್ಯ ಎಂದರು.
ಜಗತ್ತಿನ ಕಲ್ಯಾಣಕ್ಕಾಗಿ ಸವಾಲುಗಳ ಮುಕ್ತಿಗೆ, ಹಿಂದೂ ರಾಷ್ಟ್ರವೇ ಏಕೈಕ ಪರಿಹಾರ : ಪ್ರಣವ್ ಮಲ್ಯ
ಲವ್ ಜಿಹಾದ್, ಮತಾಂತರ, ದ್ವೇಷ ಭಾಷಣ ಕಾಯ್ದೆ, ಹಿಂದೂಗಳ ಬಂಧನ, ಜನಸಂಖ್ಯಾ ಸ್ಫೋಟ ಮತ್ತು ವಕ್ಫ್ ಕಾಯ್ದೆಯಂತಹ ಗಂಭೀರ ಸವಾಲುಗಳನ್ನು ಎದುರಿಸಲು ಭಾರತವನ್ನು ಸಂವಿಧಾನಬದ್ಧ ‘ಹಿಂದೂ ರಾಷ್ಟ್ರ’ವನ್ನಾಗಿ ಘೋಷಿಸುವುದು ಇಂದಿನ ಅನಿವಾರ್ಯತೆಯಾಗಿದೆ. ಅಯೋಧ್ಯೆಯ ರಾಮ ಮಂದಿರದಂತೆ ಹಿಂದೂ ರಾಷ್ಟ್ರದ ಉದಯವೂ ಕೂಡಾ ನಿಶ್ಚಿತವಾಗಿದೆ. ದೇವಸ್ಥಾನಗಳ ಸರ್ಕಾರೀಕರಣವನ್ನು ಕೊನೆಗಾಣಿಸಿ ಸಾತ್ವಿಕ ಸಮಾಜ ನಿರ್ಮಿಸಲು ರಾಮರಾಜ್ಯದ ಮಾದರಿಯೇ ನಮಗೆ ಬೇಕು. “ಹಿಂದೂಗಳು ಜಾತಿ-ಪಂಥ ಮರೆತು ಸಂಘಟಿತರಾಗಬೇಕು. ಕೇವಲ ಭಾಷಣಕ್ಕೆ ಸೀಮಿತವಾಗದೆ, ಪ್ರತಿದಿನ ಒಂದು ಗಂಟೆ ಧರ್ಮ ಕಾರ್ಯಕ್ಕಾಗಿ ಸಮಯ ಮೀಸಲಿಡಬೇಕು. ಛತ್ರಪತಿ ಶಿವಾಜಿ ಮಹಾರಾಜರ ‘ಹಿಂದವಿ ಸ್ವರಾಜ್ಯ’ದ ಸಂಕಲ್ಪದೊಂದಿಗೆ ಹಿಂದೂ ರಾಷ್ಟ್ರದ ನಿರ್ಮಾಣ ಯಜ್ಞದಲ್ಲಿ ಕೈಜೋಡಿಸಿ,” ಎಂದು ಹಿಂದೂ ಜನಜಾಗೃತಿ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯಕರಾದ ಪ್ರಣವ್ ಮಲ್ಯ ಇವರು ಕರೆ ನೀಡಿದರು.
ಹಿಂದೂಗಳ ಸಂಘಟನೆ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಯ ಉದ್ದೇಶದೊಂದಿಗೆ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಉಡುಪಿಯ ಕೊಕ್ಕರ್ಣೆಯಲ್ಲಿನ ಗಣೇಶ ಕಲಾ ಮಂದಿರದಲ್ಲಿ ಶನಿವಾರ ‘ಹಿಂದೂ ರಾಷ್ಟ್ರ-ಜಾಗೃತಿ ಸಭೆ’ಯು ಅತ್ಯಂತ ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮವನ್ನು ದೀಪ ಪ್ರಜ್ವಲನೆ, ಶಂಖನಾದ ಮತ್ತು ವೇದಮಂತ್ರ ಘೋಷದಿಂದ ಪ್ರಾರಂಭಿಸಲಾಯಿತು. ಕಾರ್ಯಕರ್ಮದ ನಿರೂಪಣೆಯನ್ನು ಸೌ. ಚೇತನಾ ಪ್ರಭು ಇವರು ಮಾಡಿದರು. ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯಕರಾದ ಶ್ರೀ. ಬಾಲಕೃಷ್ಣ ನಾಯಕ್ ಇವರು ಸಮಿತಿಯ ಕಾರ್ಯ ಪರಿಚಯ ಮತ್ತು ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿದರು. ಕೊನೆಯಲ್ಲಿ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಈ ಕಾರ್ಯಕ್ರಮದಲ್ಲಿ ನೂರಾರು ಹಿಂದೂ ಬಾಂಧವರು ಪಾಲ್ಗೊಂಡರು. ಸಭೆಯ ನಂತರ ಉಪಸ್ಥಿತ ಧರ್ಮಾಭಿಮಾನಿಗಳ ಬೇಡಿಕೆಯಂತೆ ಪ್ರತೀ ಶುಕ್ರವಾರ ಸಾಯಂಕಾಲ 5:30 ಯಿಂದ 6:30 ಗಂಟೆ ತನಕ ಕೊಕ್ಕರ್ಣೆ ಗ್ರಾಮಸ್ಥರಿಗೆ ಧರ್ಮ ಶಿಕ್ಷಣ ವರ್ಗ ಪ್ರಾರಂಭಿಸಲು ನಿಶ್ಚಯಿಸಲಾಯಿತು ಬಾಲಕೃಷ್ಣ ನಾಯಕ್ ತಿಳಿಸಿದ್ದಾರೆ.



















