
ಇಂದೋರ್: ತಿಲಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಲೆಕ್ಟ್ರಿಕ್ ವಾಹನದ (ಇವಿ) ಚಾರ್ಜಿಂಗ್ ಪಾಯಿಂಟ್‌ನಲ್ಲಿ ಸಂಭವಿಸಿದ ಸ್ಫೋಟ ಭಾರೀ ಅಗ್ನಿ ಅವಘಡಕ್ಕೆ ಕಾರಣವಾಗಿ, ಮನೆಗೂ ಬೆಂಕಿ ತಗುಲಿ ದಾರುಣ ದುರಂತ ಸಂಭವಿಸಿದೆ. ಈ ಘಟನೆಯಲ್ಲಿ ಮನೆಯೊಳಗಿದ್ದ ಅನೇಕ ಎಲ್‌ಪಿಜಿ ಸಿಲಿಂಡರ್‌ಗಳು ಸ್ಫೋಟಗೊಂಡ ಪರಿಣಾಮ 7 ಮಂದಿ ಸಜೀವ ದಹನಗೊಂಡಿದ್ದಾರೆ.
ಪುಗಾಲಿಯಾ ಕುಟುಂಬದ ಮನೆಯ ಹೊರಭಾಗದಲ್ಲಿದ್ದ ಇವಿ ಚಾರ್ಜಿಂಗ್ ವ್ಯವಸ್ಥೆಯಲ್ಲಿ ಶಂಕಿತ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಮೊದಲು ಬೆಂಕಿ ಕಾಣಿಸಿಕೊಂಡಿದ್ದು ಕೆಲವು ನಿಮಿಷಗಳಲ್ಲೇ ಆ ಬೆಂಕಿ ವೇಗವಾಗಿ ಹರಡಿ, ವಾಹನದಿಂದ ಮೂರು ಮಹಡಿ ನಿವಾಸ ಕಟ್ಟಡವನ್ನೇ ಆವರಿಸಿತು. ಇದರಿಂದಾಗಿ ಮನೆಯೊಳಗಿದ್ದವರು ಪಾರಾಗಲು ಸಾಧ್ಯವಾಗದೇ ದುರ್ಘಟನೆ ಸಂಭವಿಸಿದೆ.
ಮಾಹಿತಿ ಪ್ರಕಾರ, ಕಾರನ್ನು ರಾತ್ರಿಯಿಡೀ ಚಾರ್ಜ್ ಮಾಡಲು ಪ್ಲಗ್ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಅಕಸ್ಮಾತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಸ್ಫೋಟ ಸಂಭವಿಸಿ, ಕಾರಿಗೆ ಬೆಂಕಿ ಹೊತ್ತಿಕೊಂಡಿತು. ಬಳಿಕ ಮನೆಯೊಳಗೆ ಸಂಗ್ರಹಿಸಿದ್ದ ಡಜನ್‌ಗಿಂತ ಹೆಚ್ಚು ಎಲ್‌ಪಿಜಿ ಸಿಲಿಂಡರ್‌ಗಳಿಗೆ ಬೆಂಕಿ ತಗುಲಿ ಸ್ಫೋಟಗಳು ನಡೆದವು.
ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಿಯಂತ್ರಣಕ್ಕೆ ತಂದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ.





















































