
ಬೆಂಗಳೂರು: ಈಗಾಗಲೇ ಜಾಗತಿಕ ಮಟ್ಟದಲ್ಲಿ ಹೆಸರು ಪಡೆದಿರುವ ರಾಜ್ಯದ ನಂದಿನಿ ಬ್ರಾಂಡ್ ಇದೇ ಮೊದಲ ಬಾರಿಗೆ ಗ್ರಾಹಕರಿಗೆ ಅನುಕೂಲವಾಗುವಂತೆ ಪ್ರೋಟಿನ್ ಆಧಾರಿತ ನಂದಿನಿ ಇಡ್ಲಿ/ದೋಸೆ ಹಿಟ್ಟನ್ನು ಪರಿಚಯಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಇದನ್ನು ಬಿಡುಗಡೆಗೊಳಿಸಿದ್ದಾರೆ.
ಈಗಾಗಲೇ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಹಾಗೂ ಇನ್ನಿತರೆ ಅಗತ್ಯ ಹೊಸ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವ ಕೆಎಂಎಫ್ ಅದರ ಭಾಗವಾಗಿ ಈಗ ನಂದಿನಿ ದೋಸೆ ಹಾಗೂ ಇಡ್ಲಿ ಹಿಟ್ಟು ಪರಿಚಯಿಸಿದೆ.
ನಗರ ಪ್ರದೇಶಗಳಲ್ಲಿ ಕೆಲಸದ ಒತ್ತಡದಿಂದಾಗಿ ಬಹುತೇಕರು ನಿತ್ಯ ಆಹಾರವನ್ನು ಮನೆಯಲ್ಲೇ ತಯಾರಿಸಲು ಸಿದ್ಧ ಆಹಾರಗಳ ಮೊರೆ ಹೋಗುತ್ತಿದ್ದುದನ್ನು ಗಮನದಲ್ಲಿರಿಸಿಕೊಂಡು ಕೆಎಂಎಫ್ ಅರೋಗ್ಯಕರ ಇಡ್ಲಿ, ದೋಸೆ ಹಿಟ್ಟನ್ನು ಗ್ರಾಹಕರಿಗೆ ಒದಗಿಸಲು ತೀರ್ಮಾನಿಸಿ
ಪ್ರಪ್ರಥಮ ಬಾರಿಗೆ ಇಡ್ಲಿ/ದೋಸೆ ಹಿಟ್ಟಿನಲ್ಲಿ ಪ್ರೋಟಿನ್ ಅಂಶವನ್ನು ಶೇ. 5ರ ಪ್ರಮಾಣದಲ್ಲಿ ಮಿಶ್ರಣಗೊಳಿಸಿ ವಿನೂತನ ಶೈಲಿಯ ವೇ ಪ್ರೋಟಿನ್ ಆಧಾರಿತ ಉತ್ಕೃಷ್ಟ ಗುಣಮಟ್ಟದ ಹಿಟ್ಟನ್ನು ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಪ್ರಾಯೋಗಿಕವಾಗಿ ಬೆಂಗಳೂರು ನಗರದಲ್ಲಿ ನಂದಿನಿ ಬ್ರಾಂಡ್‌ನ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಎರಡು ವಿವಿಧ ಪ್ಯಾಕ್‌ಗಳಲ್ಲಿ ಅಂದರೆ 400 ಗ್ರಾಂಗೆ 40 ರೂ. ಹಾಗೂ 900 ಗ್ರಾಂಗೆ 80 ರೂ. ಗರಿಷ್ಠ ಮಾರಾಟ ದರ ನಿಗದಿಪಡಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದು ಮಾರುಕಟ್ಟೆಯಲ್ಲಿ ಗ್ರಾಹಕರ ಪ್ರತಿಕ್ರಿಯೆ ಅವಲೋಕಿಸಿ, ಉಳಿದ ನಗರಗಳಿಗೂ ವಿಸ್ತರಿಸುವ ಉದ್ದೇಶ ಹೊಂದಿದೆ.




