
ಬೆಂಗಳೂರು: ಸ್ಪೀಕರ್ ಯು.ಟಿ ಖಾದರ್ ಅವರು ದ್ವೇಷ ಭಾಷಣಗಳ ವಿರುದ್ಧ ಪೊಲೀಸ್ ಅಧಿಕಾರಿಗಳ ಕ್ರಮದಲ್ಲಿನ ಅಸಮರ್ಪಕತೆಯ ಬಗ್ಗೆ ತನಿಖೆ ನಡೆಸುವಂತೆ ಗೃಹ ಸಚಿವ ಪರಮೇಶ್ವರ್ ಅವರಿಗೆ ಪತ್ರ ಬರೆದಿದ್ದಾರೆ.
ಇತ್ತೀಚೆಗೆ ರಾಜ್ಯದ ಕರಾವಳಿ ಭಾಗದಲ್ಲಿ ನಡೆಯುತ್ತಿರುವ ದ್ವೇಷಭರಿತ ಭಾಷಣಗಳು, ಪ್ರಚೋದನಾತ್ಮಕ ಹೇಳಿಕೆಗಳು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ಸಮಾಜ ಘಾತುಕ ವದಂತಿಗಳು ಸಾರ್ವಜನಿಕ ಶಾಂತಿ ಮತ್ತು ಸೌಹಾರ್ದತೆಗೆ ಭಾರೀ ಧಕ್ಕೆ ಉಂಟುಮಾಡುವಂತಹ ಅಪಾಯಕಾರಿ ಸ್ಥಿತಿಯನ್ನು ನಿರ್ಮಾಣ ಮಾಡುತ್ತಿವೆ. ಈ ಗಂಭೀರ ಬೆಳವಣಿಗೆಯನ್ನು ನಾನು ಈ ಪತ್ರದ ಮೂಲಕ ತಮ್ಮ ಗಮನಕ್ಕೆ ತರಲು ಇಚ್ಛಿಸುತ್ತೇನೆ.
ಗಮನಾರ್ಹ ಸಂಗತಿಯೆಂದರೆ, ಈ ಹಿಂದಿನ ಕೆಲವು ಪೊಲೀಸ್ ಅಧಿಕಾರಿಗಳು ಈ ದ್ವೇಷ ಭಾಷಣ, ಪ್ರಚೋದನಕಾರಿ ಹೇಳಿಕೆಗಳು, ಸಾಮಾಜಿಕ ಮಾಧ್ಯಮಗಳಲ್ಲಿ ಸಮಾಜ ಘಾತುಕ ವದಂತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದೇ ಅಸಹಾಯಕತೆ ಅಥವಾ ನಿರ್ಲಕ್ಷ್ಯ ವಹಿಸಿದ್ದಾರೆ. ಆದರೆ ಈಗಿನ ಪೊಲೀಸ್ ಅಧಿಕಾರಿಗಳು ದ್ವೇಷ ಭಾಷಣದ ವಿರುದ್ಧ ಸಮರ್ಪಕ ಹಾಗೂ ತ್ವರಿತ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಒಂದು ವೇಳೆ, ಹಿಂದಿನ ಅಧಿಕಾರಿಗಳು ಸೂಕ್ತ ಸಮಯದಲ್ಲಿ ಕ್ರಮ ಕೈಗೊಂಡಿದ್ದರೆ ಕರಾವಳಿ ಭಾಗದಲ್ಲಿ ಒಂದೆರೆಡು ಧರ್ಮಾಧಾರಿತ ಕೊಲೆ ಮತ್ತು ಹಿಂಸಾಚಾರವನ್ನು ತಪ್ಪಿಸಬಹುದಾಗಿತ್ತು. ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದರೋಡೆ, ಮಾದಕ ವಸ್ತು ಸಾಗಾಟ ಮತ್ತಿತರ ಸಮಾಜಘಾತುಕ ಕೆಲಸಗಳಲ್ಲಿ ನಿಷ್ಠೆಯಿಂದ, ತ್ವರಿತಗತಿಯಲ್ಲಿ ಸೂಕ್ತ ಕ್ರಮ ಕೈಗೊಂಡ ಈ ಹಿಂದಿನ ಪೊಲೀಸ್ ಅಧಿಕಾರಿಗಳು ದ್ವೇಷ ಭಾಷಣಗಳ ವಿರುದ್ಧ ಯಾಕೆ ಸೂಕ್ತ ಕ್ರಮ ಕೈಗೊಳ್ಳಲಿಲ್ಲ? ಅದಕ್ಕೆ ಕಾರಣಗಳೇನು ಅನ್ನುವ ಸೂಕ್ತ ತನಿಖೆಯಾಗಬೇಕಿದೆ ಎಂದು ವಿನಂತಿ ಮಾಡಿದ್ದಾರೆ.
ನಮ್ಮ ರಾಜ್ಯದ ಆಂತರಿಕ ಶಾಂತಿ, ಸಾಮರಸ್ಯ ಹಾಗೂ ಸಾರ್ವಜನಿಕ ನಂಬಿಕೆಯನ್ನು ಮತ್ತಷ್ಟು ಬಲಪಡಿಸಬಹುದೆಂಬ ಆಶಯದಿಂದ ಈ ಪತ್ರವನ್ನು ತಮ್ಮ ಗಮನಕ್ಕೆ ತರುತ್ತಿದ್ದೇನೆ. ತಾವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಅಗತ್ಯ ಕ್ರಮ ಕೈಗೊಳ್ಳಬೇಕೆಂಬ ನನ್ನ ಅಭಿಪ್ರಾಯವನ್ನು ಈ ಮೂಲಕ ತಿಳಿಸುತ್ತಿದ್ದೇನೆ. ಅಲ್ಲದೇ ಹಿಂದಿನ ಪೊಲೀಸ್ ಅಧಿಕಾರಿಗಳು ದ್ವೇಷ ಭಾಷಣ ತಡೆಯಲು ವಿಫಲರಾಗಿದ್ದರು. ಅದರ ಬಗ್ಗೆ ತನಿಖೆ ಮಾಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.



















