
ಕೊಯಮತ್ತೂರು: ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮಿಳುನಾಡಿನ ಕೊಯಮತ್ತೂರಿನಲ್ಲಿ ನೈಸರ್ಗಿಕ ಕೃಷಿ ಶೃಂಗಸಭೆ ಉದ್ಘಾಟಿಸುವ ವೇಳೆ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ 21ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಿದ್ದಾರೆ.
ಮಧ್ಯಾಹ್ನ 1:30ರಿಂದ 2 ಗಂಟೆಯ ಅವಧಿಯಲ್ಲಿ ಇದರ ಬಿಡುಗಡೆ ಆಗುವ ನಿರೀಕ್ಷೆಯಿದ್ದು 9 ಕೋಟಿ ರೈತರಿಗೆ ಒಟ್ಟು 18,000 ಕೋಟಿ ರೂಗೂ ಅಧಿಕ ಹಣ ಸಂದಾಯವಾಗಲಿದೆ.
ಈಗಾಗಲೇ ಅನರ್ಹ ಫಲಾನುಭವಿಗಳನ್ನು ಹುಡುಕಿ, ಅವರನ್ನು ಪಟ್ಟಿಯಿಂದ ಹೊರತೆಗೆಯುವ ಪ್ರಕ್ರಿಯೆ ನಡೆಯುತ್ತಿದ್ದು ಇಕೆವೈಸಿ ಅಪ್ಡೇಟ್ ಮಾಡದವರನ್ನೂ ಪಟ್ಟಿಯಿಂದ ಕೈಬಿಡಲಾಗುತ್ತಿದೆ. ಹೀಗಾಗಿ, ಪಿಎಂ ಕಿಸಾನ್ ಸ್ಕೀಮ್ನಲ್ಲಿ 21ನೇ ಕಂತಿನ ಹಣ ಸಂದಾಯವಾಗುವವರ ಸಂಖ್ಯೆ ಕಡಿಮೆಯಾಗುತ್ತಿದೆ.
ಈ ಹಿಂದೆ ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸಿಕೊಂಡವರು ತಪ್ಪದೇ ಇಕೆವೈಸಿ ಮಾಡಿಸಬೇಕು. ಸಮೀಪದ ನಾಡಕಚೇರಿ ಅಥವಾ ರೈತ ಸಂಪರ್ಕ ಕೇಂದ್ರಕ್ಕೆ (ಸಿಎಸ್ಸಿ) ಹೋಗಿ ಅಲ್ಲಿ ಬಯೋಮೆಟ್ರಿಕ್ ನೀಡಿ ಇಕೆವೈಸಿ ಮಾಡಿಸಬಹುದು. ಅಲ್ಲಿಗೆ ಹೋಗಲಾರದವರು ಪಿಎಂ ಕಿಸಾನ್ ಪೋರ್ಟಲ್ನಲ್ಲಿ ಒಟಿಪಿ ನೀಡಿ ಇಕೆವೈಸಿ ಮಾಡಿಸಬಹುದು. ಹಾಗೆಯೇ, ಪಿಎಂ ಕಿಸಾನ್ ಮೊಬೈಲ್ ಆ್ಯಪ್ ಮತ್ತು ಆಧಾರ್ ಫೇಸ್ ಆರ್ಡಿ ಆ್ಯಪ್ಗಳ ಮೂಲಕವೂ ಇಕೆವೈಸಿ ಮಾಡಿಸಿಕೊಳ್ಳಬಹುದು.









