
ನವದೆಹಲಿ: ಬುಧವಾರದಿಂದ ಸಂಸತ್ತಿನ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಎರಡು ಹಂತಗಳಲ್ಲಿ ನಡೆಯುವ ಈ ಅಧಿವೇಶನವು ಏಪ್ರಿಲ್ 2ರಂದು ಮುಕ್ತಾಯಗೊಳ್ಳಲಿದೆ. ಕೇಂದ್ರ ಬಜೆಟ್ ಮಂಡನೆಯ ನಿರೀಕ್ಷೆಯ ನಡುವೆ, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಮನರೇಗಾ) ಕಾಯ್ದೆ ರದ್ದುಪಡಿಸಿ ಜಾರಿಗೆ ತಂದಿರುವ ವಿವಾದಾತ್ಮಕ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ವಿರೋಧಿಸಿ ಪ್ರತಿಪಕ್ಷಗಳು ಸದನದಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸುವ ಸಾಧ್ಯತೆ ಇದೆ.
ಬಜೆಟ್ ಅಧಿವೇಶನವು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಲೋಕಸಭೆ ಹಾಗೂ ರಾಜ್ಯಸಭೆಯ ಸಂಯುಕ್ತ ಸಭೆಯಲ್ಲಿ ಮಾಡುವ ಭಾಷಣದೊಂದಿಗೆ ಆರಂಭವಾಗಲಿದ್ದು ಆರ್ಥಿಕ ಸಮೀಕ್ಷೆಯನ್ನು ಜನವರಿ 29ರಂದು ಮಂಡಿಸಲಾಗುವುದು. 2026–27ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಫೆಬ್ರವರಿ 1ರಂದು ಮಂಡಿಸುವುದಾಗಿ ಸರ್ಕಾರ ತಿಳಿಸಿದೆ.
ಅಧಿವೇಶನದ ಮೊದಲ ಹಂತವು ಜನವರಿ 28ರಿಂದ ಫೆಬ್ರವರಿ 13ರವರೆಗೆ ನಡೆಯಲಿದ್ದು, ಎರಡನೇ ಹಂತವು ಮಾರ್ಚ್ 9ರಿಂದ ಏಪ್ರಿಲ್ 2ರವರೆಗೆ ನಡೆಯಲಿದ್ದು ಒಟ್ಟಾರೆ 30 ದಿನಗಳ ಕಾಲ ಸಂಸತ್ತಿನ ಕಲಾಪ ನಡೆಯಲಿದೆ.



















