32.9 C
Udupi
Sunday, May 4, 2025
spot_img
spot_img
HomeBlog"ಆಟಿ ಆಚರಣೆಯ ಮಹತ್ವ"

“ಆಟಿ ಆಚರಣೆಯ ಮಹತ್ವ”

“ತುಳುವ ಸಂಸ್ಕೃತಿಯ ಪ್ರಾಕೃತಿಕ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆ ಎಲ್ಲೆಡೆ ಪಸರಲಿ” ಡಾ. ಸುಮತಿ

ಆಟಿ ಆಚರಣೆಯ ಮಹತ್ವ

ತುಳುನಾಡ ಸಂಸ್ಕೃತಿ, ಸಂಸ್ಕಾರವನ್ನು ಹೊತ್ತು ಆಟಿ ತಿಂಗಳು ಮತ್ತೆ ಬಂದಿದೆ.ಆಟಿ ತಿಂಗಳು ಎಂದರೆ ಸುಮಾರು ಜುಲೈ ತಿಂಗಳಿನಲ್ಲಿ ಬರುವ ಕರ್ಕಾಟಕ ಸಂಕ್ರಮಣದ ಮರುದಿನದಂದು ಶುರುವಾಗಿ ಮುಂದಿನ ಸಿಂಹ ಸಂಕ್ರಮಣದ ವರೆಗೆ. ತುಳು ನಾಡಿನ ಜನರಿಗೆ ಪ್ರತಿಯೊಂದು ತಿಂಗಳು ವಿಶಿಷ್ಟವೇ ವಿಶೇಷವೇ. ಆಟಿ ತಿಂಗಳು ಕೂಡ ಒಂದು ರೀತಿಯಲ್ಲಿ ಪವಿತ್ರವೇ. ಯಾಕೆಂದರೆ ಹಬ್ಬಗಳು ಆರಂಭವಾಗುವುದು ಆಟಿ ತಿಂಗಳ ಆಟಿ ಅಮಾವಾಸ್ಯೆಯಿಂದಲೇ.
ಆರ್ಟಿ ತಿಂಗಳಲ್ಲಿ ಕಷ್ಟದ ತಿಂಗಳಾದರೂ ಅದು ಇಷ್ಟದ ತಿಂಗಳು. ಹಿಂದಿನ ಕಾಲದಲ್ಲಿ ಆಟಿ ಅಂದರೆ ಒಂದೇ ಸವನೆ ಮಳೆ ಸುರಿಯುತ್ತಿತ್ತು .ಹಾಗಾಗಿ ಆಟಿ ತಿಂಗಳು ಹೇಗಿರುತ್ತದೋ ಎಂಬ ಭಯ ಜನರನ್ನು ಮೊದಲೇ ಕಾಡುತ್ತಿತ್ತು.ಸುರಿಯುವ ಮಳೆ ನಿಲ್ಲುತ್ತದೋ ಇಲ್ಲವೋ, ಏನೇನೋ ಹಾನಿಯಾಗುತ್ತದೋ, ಬೆಳೆಗಳೆಲ್ಲ ನಾಶವಾಗುತ್ತದೋ ಎಂಬ ಭಯವಿತ್ತು.ಆದರೆ ಕಾಲ ಬದಲಾದಂತೆ ಆಟಿ ತಿಂಗಳ ಸ್ವರೂಪ ಕೂಡ ಬದಲಾಗಿದೆ. ಹಿಂದೆ ಆಟಿಯಲ್ಲಿ ಸುರಿಯುತ್ತಿದ್ದಷ್ಟು ಮಳೆ ಇಂದಿಲ್ಲ.ಹಿಂದೆ ಆಟಿ ತಿಂಗಳಲ್ಲಿ ಜನರಿಗೆ ತುಂಬಾ ಕಷ್ಟ ಇತ್ತು. ಈಗ ಆ ಕಷ್ಟ ಭಯ ಕಡಿಮೆ ಆಗಿದೆ ಎಂದು ಹೇಳಬಹುದು.ಆಟಿ ಅಶುಭ ಎಂಬ ಕಲ್ಪನೆಯಿಂದ.ಆಟಿ ತಿಂಗಳಲ್ಲಿ ಯಾವುದೇ ಹಬ್ಬ ಹರಿದಿನಗಳು, ಶುಭ ಸಮಾರಂಭಗಳು ನಡೆಯದಿದ್ದರೂ ತುಳುವ ನಾಡಿನ ಜನ ಆಚರಿಸುವ ಪದ್ಧತಿಗಳು ಮಾತ್ರ ವಿಶಿಷ್ಟವಾಗಿವೆ.

ಆಟಿದ ತಿನಸ್
ಆಟಿ ತಿಂಗಳಲ್ಲಿ ಹಳ್ಳಿಯ ರೈತರ ಮನೆಯ ಅಡುಗೆ ಮನೆಯಲ್ಲಿ ವಿವಿಧ ಖಾದ್ಯಗಳು ತಯಾರಾಗುತ್ತವೆ. ಮಳೆಗಾಲಕ್ಕೋಸ್ಕರ ಮನೆಯ ಆಟ್ಟದಲ್ಲಿ ಸಂಗ್ರಹಿಸಿಟ್ಟಿದ್ದ ದವಸ ಧಾನ್ಯಗಳೆಲ್ಲ ಖಾಲಿಯಾಗಿ ಆಹಾರದ ಕೊರತೆ ಕಾಣಿಸಿಕೊಳ್ಳುತ್ತಿತ್ತು. ಆದುದರಿಂದ ರೈತ ಜನರು ಪ್ರಕೃತಿಯ ಮೊರೆ ಹೋಗಿ ಪ್ರಕೃತಿಯಲ್ಲಿ ಸಿಗುವಂತಹ ಸಸ್ಯದ ಚಿಗುರು,ಗೆಡ್ಡೆ ಗೆಣಸು,ಫಲವಸ್ತು ಸೊಪ್ಪುಗಳನ್ನು ತಂದು ಬಗೆಬಗೆಯ ಖಾದ್ಯಗಳನ್ನು ತಯಾರಿಸಿ ಸೇವಿಸುವ ಪದ್ಧತಿ ಇತ್ತು.ಅದನ್ನು ಇಂದೂ ಕೂಡ ನಾವು ಆಟಿದ ತಿನಸ್ ಎಂಬ ಹೆಸರಿನಲ್ಲಿ ತಯಾರಿಸಿ ತಿನ್ನುವುದರ ಮೂಲಕ * ಆಟಿಡೊಂಜಿದಿನ* ಅಥವಾ ಆಟಿದ ಕೂಟ ಅಂತ ಹಬ್ಬದ ರೀತಿಯಲ್ಲಿ ಆಚರಿಸುತ್ತಿದ್ದೇವೆ. ಇದರ ಹಿಂದಿರುವ ಉದ್ದೇಶ ಹಿಂದಿನ ಕಾಲದಲ್ಲಿನ ಜನರು ಕಷ್ಟದ ಜೀವನದಲ್ಲೂ ಸಹ ಹೇಗೆ ಸುಸಂಸ್ಕೃತರಾಗಿ ಬದುಕುತ್ತಿದ್ದರು ಎಂಬುವುದನ್ನು ನಾವು ತಿಳಿಯಬೇಕು,ನಮ್ಮ ಮಕ್ಕಳಿಗೂ ಅರಿವು ಮೂಡಿಸಬೇಕು ಎಂಬುವುದು

ಹಲಸು ಮತ್ತು ಗೆಣಸಿನಿಂದ ತಯಾರಿಸಿದ ಹಪ್ಪಳ,ಹಲಸಿನ ಬೀಜ ಬೇಯಿಸಿ ಒಣಗಿಸಿ ಮಾಡಿದ * *ಸಾಂತಣಿ * ಸುಟ್ಟ ಹುಣಸೆ ಬೀಜ (ಪುಲ್ಕೊಟೆ) ಗೆಣಸು ಬೇಯಿಸಿ ಸಣ್ಣ ಸಣ್ಣ ಕೊಯ್ದು,ಒಣಗಿಸಿ ಇಟ್ಟ “ಗೆಣಸಿನ ಹೋಳು”ಇವುಗಳೆಲ್ಲ ಜೋರು ಮಳೆ ಸುರಿಯುವಾಗ, ಚಳಿಯಾಗುವಾಗ ಬಾಯಿಗೆ ಹಾಕಿಟ್ಟು,ರುಚಿ ಸ್ವಾಧಿಸುವ ಖುಶಿ ಈಗಿನ ಯಾವ ಚಾಕಲೇಟ್ ಗಳಿಂದಲೂ ಸಿಗಲು ಸಾಧ್ಯವಿಲ್ಲ.

ಇನ್ನೂ ಹಲಸಿನ ಬೀಜ ಹಾಕಿದ ಕೆಸುವಿನ ಪಲ್ಯ,ಅರಶಿನ ಎಲೆ ಕಡುಬು,ತಗಟೆ ಸೊಪ್ಪು ಹಲಸಿನ ಬೀಜದ ಸುಕ್ಕ, ಹಲಸಿನ ಹಣ್ಣಿನ ಕಡುಬು,ಕೆಸುವಿನ ಪತ್ರೋಡೆ, ಉಪ್ಪಿನ ಹಲಸಿನ ತೊಳೆ ಅಂದರೆ ಉಪ್ಪಡಚ್ಚಿಲ್ ,ಉಪ್ಪಿನಲ್ಲಿ ಹಾಕಿಟ್ಟ ಮಾವಿನಕಾಯಿ ಗೊಜ್ಜು, ಹಲಜಿನ ಬೀಜದ ಜಾಮ್
ನೀರು ಕುಕ್ಕು ಚಟ್ನಿ, ಹಲಸಿನ ಎಲೆ ಹಾಗೂ ಕೇದಗೆ ಎಲೆಯಲ್ಲಿ ಮಾಡುವ ಮೂಡೆ,
ಪದೆಂಗಿ ಕಣಿಲೆ ಗಸಿ,ಕಣಿಲೆ ಸುಕ್ಕ,ಅಮಟೆ ಬಜ್ಜಿ,
ಹುರುಳಿ ಸಾರು,ನೆಲ್ಲಿ-ಪೇರಳೆ-ಶುಂಠಿ ತಂಬುಳಿ
ತೇವು ಪದ್ಪೆ ಗಸಿ, ತಿಮೆರೆ ಚಟ್ನಿ ಕೆಸುವಿನ ಚಟ್ನಿ, ಚೇಟ್ಲ,ಗುಜ್ಜೆ ಕಡುಬು,ಗುಜ್ಜೆ ಕೇಕ್
ಮುಂತಾದ ಆಹಾರ ಪದಾರ್ಥಗಳನ್ನು ಆಟಿ ತಿಂಗಳಲ್ಲಿ ಮಾತ್ರ ನೋಡಬಹುದಾಗಿದೆ ಹಾಗೂ ತಿನ್ನಬಹುದಾಗಿದೆ.

ಪ್ರಕೃತಿಯಲ್ಲಿ ಸಿಗುವ ವಿವಿಧ ರೀತಿಯ ಇಂತಹ ವಸ್ತುಗಳಲ್ಲಿ ಔಷಧೀಯ ಗುಣಗಳು ಹೇರಳವಾಗಿ ಇರುತ್ತವೆ ಎನ್ನುವುದು ನಂಬಿಕೆಯಾಗಿದೆ.ಇಂತಹ ವಸ್ತುಗಳನ್ನು ಸೇವಿಸುವುದರಿಂದ ಆಟಿ ತಿಂಗಳಲ್ಲಿ ಬೀಕರ ಮಳೆಯಿಂದಾಗಿ, ಸೂರ್ಯನ ಬಿಸಿಲು ಬೀಳದೆ,ಕಾಡುವ ರೋಗಗಳನ್ನು ಉಪಶಮನ ಮಾಡುವುದು ಈ ರೀತಿಯ ಆಹಾರ ಸೇವಿಸುವುದರ ಹಿಂದಿನ ಉದ್ದೇಶವಾಗಿರಬಹುದು.

ಆಟಿ ತಿಂಗಳಿನಲ್ಲಿ ತುಳುನಾಡಿನಲ್ಲಿ ಆಚರಿಸುತ್ತಿದ್ದ ವಿವಿಧ ಆಚರಣೆಗಳು

ತುಳುವ ಸಂಸ್ಕೃತಿಯ ಮೂಲ ಬೇರು ದೈವಾರಾಧನೆ ಅಥವಾ ಭೂತಾರಾಧನೆ , ನಾಗಾರಾಧನೆ ಮತ್ತು ಸಿರಿ ಆರಾಧನೆ ವೈಧಿಕ ಸಂಸ್ಕೃತಿಯನ್ನೂ ಮೀರಿ ತುಳುವರನ್ನು ಆವರಿಸಿಕೊಂಡಿರುವಂತಹದ್ದು.
ಇದೆ ರೀತಿ ಆಟಿ ತಿಂಗಳಲ್ಲಿ ತುಳುವರು ಕೆಲವು ವಿಶಿಷ್ಟವಾದ ಆಚರಣೆಗಳನ್ನು ಮಾಡುತ್ತಾರೆ
ಅವುಗಳೆಂದರೆ
೧* ಅಗೆಲು ಬಲಸುನಿ (ಅಗೆಲ್ ಕುಲ್ಲುನಿ*
ಆಟಿಯಲ್ಲಿ ಸತ್ತವರಿಗೆ ಬಡಿಸುವುದು ಎನ್ನುತ್ತಾರೆ. ಮೊದಲಾಗಿ ಒಂದು ಕೋಳಿಯನ್ನು ಕೊಂದು ಪದಾರ್ಥ ಮಾಡಬೇಕು. ಒಂದು ಸೇರಿನ ಅಕ್ಕಿಯ ಅನ್ನ ಮಾಡಬೇಕು .ಒಣ ಕೊಲ್ಲತರು ಮೀನಿನ ಗಸಿ ಮಾಡಬೇಕು.ಆ ಮೇಲೆ ಹದಿನಾಲ್ಕು ಬಾಳೆಯ ಎಲೆಯನ್ನು ಹಾಕಬೇಕು, ನಡುವೆ ಒಂದು ಮಣೆ ಇಟ್ಟು ಅದರ ಮೇಲೆ ಒಂದು ಚೆಂಬು ನೀರು ಇಟ್ಟು, ಶುದ್ಧವಾದ ಬಿಳಿಯ ವಿಸ್ತೀರ್ಣ ಇಡುತ್ತಾರೆ. ಆ ಮೇಲೆ ಬಾಳೆಯ ಎಲೆಯನ್ನು ಹಾಕಿ ಮಾಡಿದ ಆಹಾರವನ್ನು ಬಡಿಸಬೇಕು, ಮೊದಲಾಗಿ ಒಣ ಮೀನಿನ ಗಸಿಯನ್ನು ಎಲೆಯ ತುದಿಯಲ್ಲಿ ಬಡಿಸಬೇಕು ಆ ಬಳಿಕ ಕೋಳಿಯ ಪದಾರ್ಥಗಳನ್ನು ಬಡಿಸಬೇಕು. ಆಮೇಲೆ ವೀಳ್ಯದೆಲೆ ಇಟ್ಟು. ಬಾಗಿಲು ಎಳೆದು, ಎಲ್ಲರೂ ಹೊರಗೆ ಹೋಗಬೇಕು. ಸ್ವಲ್ಪ ಸಮಯದ ನಂತರ ಒಳಗೆ ಹೋಗಿ, ಮಣೆಯಲ್ಲಿ ಇಟ್ಟ ನೀರನ್ನು ಹೊರಗೆ ತಂದು ಚೆಲ್ಲಬೇಕು. ಮತ್ತೆ, ಅಕ್ಕಿಯನ್ನು ಹಾರಿಸಬೇಕು. ಮತ್ತೆ ಕುಟುಂಬದ ಹಿರಿಯ ಆತ್ಮಗಳಿಗೆ ಕೈ ಮುಗಿದು, ಇದು ಆಟಿಯ ಪರ್ವ ಹಾಗಾಗಿ ಈ ಸಮಯದಲ್ಲಿ ನಿಮಗೆ ನಾವು ಬಡಿಸಿದ ಅಗೆಲು, ಇದನ್ನು ಸಂತೋಷದಿಂದ ಸ್ವೀಕರಿಸಿ ಬೇರೆ ಎಲ್ಲಿಗೂ ಹೋಗದೆ ಇಲ್ಲಿಯೇ ಇದ್ದು ಬಿಡಿ ಎಂದು ಕುಟುಂಬದ ಎಲ್ಲರೂ ಸೇರಿ ಪ್ರಾರ್ಥಿಸುತ್ತಾರೆ

ಆಟಿ ಕುಲ್ಲುನಿ ‘ ಅಥವಾ ‘ಆಟಿ ತಮ್ಮನ’
ಆಟಿ ತಿಂಗಳಲ್ಲಿ ರೈತರೆಲ್ಲ ಕೃಷಿ ಕೆಲಸವನ್ನು ಮುಗಿಸಿ ವಿಶ್ರಾಂತಿಯಲ್ಲಿರುವಂತಹ ಸಮಯ ಈ ತಿಂಗಳಲ್ಲಿ ನಮಗೆ ನಿಮಗೆಲ್ಲರಿಗೆ ಗೊತ್ತಿರುವಂತೆ ಹೊಸತಾಗಿ ಮದುವೆಯಾದ ಹೆಣ್ಣು ಮಗಳನ್ನು ತವರು ಮನೆಗೆ ಕರೆದುಕೊಂಡು ಬರುವಂತಹ ಪದ್ಧತಿ ಇದೆ .ಇದಕ್ಕೆ ಆಟಿ ಕುಲ್ಲುನಾ, ಆಟಿ ತಮ್ಮನ ಹೀಗೆಲ್ಲ ಕರೆಯುವರು. ಸೊಸೆಯನ್ನು ತವರು ಮನೆಗೆ ಕಳಿಸಿಕೊಡುವಂತಹ ಪದ್ಧತಿ, ತವರು ಮನೆಯಲ್ಲಿ ನಾಟಿ ಕೋಳಿ ಪಲ್ಯವನ್ನು ಮಾಡಿ ಮಗಳಿಗೆ ಮತ್ತು ಅಳಿಯನಿಗೆ ಬಡಿಸುತ್ತಾರೆ ಇದೇ ಆಟಿ.
ಆಟಿ ತಿಂಗಳಿನಲ್ಲಿ ಮದುವೆಯಾದ ದಂಪತಿ ತಮ್ಮ ಹಿರಿಯರಲ್ಲಿಗೆ ಹೋಗಿ ಅವರ ಆಶೀರ್ವಾದ ತೆಗೆದುಕೊಂಡು ಬರುವ ಆಚರಣೆ ಇದು.ಇದನ್ನು ಈಗ ಹೆಚ್ಚಿನವರು ಮಾಡುತ್ತಿಲ್ಲ. ಈ ಆಚರಣೆ ತುಂಬಾ ವಿರಳವಾಗಿದೆ.ಇದು ಗಂಡ ಹೆಂಡತಿ ವಿರಹ ವೇದನೆ ಅನುಭವಿಸುವ ಸಮಯ.ಇದರ ಉದ್ದೇಶ ಇಷ್ಟೇ .ಆಟಿ ತಿಂಗಳಲ್ಲಿ ಹೆಂಡತಿ ಗಂಡನ ಜತೆ ಇದ್ದು ಗರ್ಭಿಣಿಯಾದರೆ ಸುಗ್ಗಿ ಮಾಸದಲ್ಲಿ ಆಕೆ ಮಗುವಿಗೆ ಜನ್ಮ ನೀಡುತ್ತಾಳೆ. ಆ ತಿಂಗಳಲ್ಲಿ ತುಂಬಾ ಸೆಕೆ ಮತ್ತು ಕೆಲಸದ ದಿನಗಳಾಗಿರುವುದರಿಂದ ಮಗುವಿನ ಆರೈಕೆಗೆ ತೊಂದರೆ ಆಗುತ್ತದೆ ಎಂಬ ಕಾರಣಕ್ಕೆ ಹೆಂಡತಿಯನ್ನು ತವರು ಮನೆಗೆ ಕರೆಸಿಕೊಳ್ಳುತ್ತಾರೆ .

೩ **ಆಟಿ ಕಳೆಂಜ **

ತುಳುವಿನ ಜನಪದ ಪ್ರಕಾರಗಳಲ್ಲಿ ಆಟಿ ಕಳೆಂಜ ನಲಿಕೆ ಒಂದು ಕಲಾ ಪ್ರಕಾರ. ಇದು ದಕ್ಷಿಣ ಕನ್ನಡದಲ್ಲಿ ಸಾಧಾರಣವಾಗಿ ಕಂಡುಬರುತ್ತದೆ. ನಲಿಕೆ ಜನಾಂಗದವರು ಈ ಕುಣಿತ ನಡೆಸಿಕೊಡುತ್ತಾರೆ.ಇದು ಆಟಿ ತಿಂಗಳಲ್ಲಿ ಕಂಡುಬರುವ ವಿಶೇಷ. ಆಟಿ ಕಳೆಂಜನನ್ನು ಮಾರಿಯನ್ನು ಅಥವಾ ದುಷ್ಟ ಶಕ್ತಿಗಳನ್ನು, ರೋಗರುಜಿನಗಳನ್ನು ಓಡಿಸುವ, ಮಾಂತ್ರಿಕ ಎಂದು ಕರೆಯಲಾಗುತ್ತದೆ. ಆಟಿ ತಿಂಗಳಲ್ಲಿ ತುಳುನಾಡಿನ ಜನರಿಗೆ ರಕ್ಷಣೆ ನೀಡುತ್ತಾ ಇರುವ ದೈವ್ವಗಳು ಘಟ್ಟ ಹತ್ತುತ್ತವೆ ಎಂಬ ನಂಬಿಕೆ.ಹಾಗಾಗಿ ಆಟಿ ತಿಂಗಳಿನಲ್ಲಿ ಮಾರಿ ಓಡಿಸಲು ಆಟಿಕಳೆಂಜ ಮನೆಮನೆಗೆ ಬರುತ್ತಿದ್ದನು.ಆಟಿ ಕಳಂಜನ ವೇಷದಲ್ಲಿ ಸೊಂಟಕ್ಕೆ ತೆಂಗಿನ ತಿರಿ, ಕಾಲಿಗೆ ಗಗ್ಗರ, ಕೈಗೆ-ಮೈಗೆ ಬಣ್ಣ, ಗಡ್ಡ ಮತ್ತು ಮೀಸೆ, ಅಡಿಕೆ ಹಾಳೆಯಿಂದ ಮಾಡಿದ ಮತ್ತು ಕಿಸಗಾರ ಹೂವಿನಿಂದ ಸಿಂಗರಿಸಿದ ಟೊಪ್ಪಿ ಇರುತ್ತದೆ. ಕೈಯಲ್ಲಿ ತಾಳೆಗರಿಯ ಛತ್ರಿ ಇರುತ್ತದೆ. ಜೊತೆಗೆ ಹಿರಿಯರೊಬ್ಬರು “ತೆಂಬರೆ”ಯೊಂದಿಗೆ ಪಾಡ್ದನ ಹೇಳಿಕೊಂಡು ಮನೆಮನೆಗೆ ಬರುತ್ತಾರೆ.ಇವರಿಗೆ ಧವಸ ಧಾನ್ಯ, ತೆಂಗಿನಕಾಯಿ ನೀಡುತ್ತಾರೆ. ತುಳು ಪಾಡ್ದನಗಳ ಪ್ರಕಾರ ಆಟಿ ಕಳೆಂಜ ಬಂದು ರೋಗ ರುಜಿನೆಗಳನ್ನು ಕಡಿಮೆಮಾಡುತ್ತಾನೆ ಎಂಬ ನಂಬಿಕೆ.

ಆಟಿ ಅಮಾವಾಸ್ಯೆ*: ಆಟಿ ತಿಂಗಳಿನಲ್ಲಿ ಬರುವ ಅಮಾವಾಸ್ಯೆ.ಮದ್ದು ಕುಡಿಯುವ ಅಮಾವಾಸ್ಯೆ. ಇದನ್ನು ಬೇರೆ ಕಡೆಗಳಲ್ಲಿ ಭೀಮನ ಅಮಾವಾಸ್ಯೆ ಎಂದು ಕರೆಯುತ್ತಾರೆ.ಪಾಲೆ ಮರ ಹಾಲೆ (ಸಪ್ತಪರ್ಣಿ) ಮರದ ತೊಗಟೆಯನ್ನು ಕಡೆದು ತೊಗಟೆಯ ಕಷಾಯ ಮಾಡಿ ಕುಡಿಯುತ್ತಾರೆ. ಇದರಲ್ಲಿ ಒಂದು ವಿಶೇಷತೆ ಎಂದರೆ ತೊಗಟೆಯನ್ನು ಸೂರ್ಯನ ಬೆಳಕು ಹರಿಯುವ ಮೊದಲೇ ಕಲ್ಲಿನಿಂದ ಜಜ್ಜಿ ತೆಗೆಯುತ್ತಾರೆ. ಯಾರು ಕತ್ತಿಯನ್ನು ಬಳಸಿ ತೊಗಟೆಯನ್ನು ತುಂಡರಿಸುವುದಿಲ್ಲ. ಇದಕ್ಕೆ ಕಾರಣ ಕತ್ತಿ ತಾಗಿದರೆ ವಿಷ ಎಂದು ಹೇಳುತ್ತಾರೆ.ಆಟಿಯ ಅಮವಾಸ್ಯೆಯಂದು ಇದರಲ್ಲಿ ಸುಮಾರು ಒಂದು ಸಾವಿರದ ಒಂದು ಬಗೆಯ ಔಷಧಗಳು ಸೇರಿಕೊಳ್ಳುತ್ತವೆ ಎಂಬ ನಂಬಿಕೆ ಹಿರಿಯರದು.ಪಾಲೆ ಮರದ ತೊಗಟೆಯನ್ನು ಪ್ರಾತಃಕಾಲದಲ್ಲಿ ಕಲ್ಲಿನಿಂದ ಜಜ್ಜಿ ತೆಗೆದು ರಸವನ್ನು ಸೇವಿಸುವುದರಿಂದ ಶರೀರದಲ್ಲಿರುವ ಕಶ್ಮಲಗಳನ್ನು ಹೊರಹಾಕಿ, ರೋಗಗಳಿಂದ ರಕ್ಷಣೆ ಒದಗಿಸಿ ವರುಷ ಪೂರ್ತಿ ಆರೊಗ್ಯವಾಗಿರುವಂತೆ ಮಾಡುತ್ತದೆ ಎಂದು ಪ್ರತೀತಿ.
ಈ ಕಷಾಯವು ದೇಹದೊಳಗಿನ ನಂಜು ಮತ್ತಿತರ ಅನಾವಶ್ಯಕ ವಸ್ತುಗಳನ್ನು ನಿವಾರಿಸುವುದಲ್ಲದೆ ಶಕ್ತಿಯನ್ನು ಸಂಚಯಿಸುವಂತೆ ಮಾಡುತ್ತದೆ. ವೈಜ್ಞಾನಿಕವಾಗಿಯೂ ಈ ಅಂಶವನ್ನು ಕೆಲವು ಸಂಶೋಧನೆಗಳು ದೃಢೀಕರಿಸಿವೆ ಅನ್ನುವುದು ತುಳುವರಲ್ಲಿದ್ದ ಜನಪದೀಯ ಔಷಧ ಜ್ಞಾನಕ್ಕೆ ದೃಷ್ಟಾಂತವಾಗಿದೆ.ಹಾಗಾಗಿ ಈಗ ಎಲ್ಲರೂ ಇದನ್ನು ಕುಡಿಯುತ್ತಾರೆ.ಪಾಲೆಮರದ ತೊಗಟೆ ಸಿಗದವರಿಗೆ, ತಯಾರಿಸಲು ಆಗದವರಿಗೆ ಧಾರ್ಮಿಕ ಕೇಂದ್ರಗಳಲ್ಲಿ, ಸಂಘ ಸಂಸ್ಥೆಗಳಲ್ಲಿ ಆಟಿ ಅಮಾವಾಸ್ಯೆಯ ಮುಂಜಾನೆ ಈ ಔಷಧ ವಿತರಣೆಯ ವ್ಯವಸ್ಥೆಯೂ ಅಲ್ಲಲ್ಲ ಬೆಳೆದು ಬಂದಿದೆ. ಸೇವನೆಯ ಬಳಿಕ ಮನೆ ಮಂದಿ ಮೆಂತೆಯ ಗಂಜಿಯನ್ನು ಸೇವಿಸುವುದು ನಡೆದುಕೊಂಡು ಬಂದಿರುವ ಸಂಪ್ರದಾಯ.
ಹಿಂದೆಲ್ಲಾ ಆಟಿ ತಿಂಗಳಿನಲ್ಲಿ ಎಷ್ಟು ಮಳೆಯಾಗುತ್ತಿತ್ತು ಎಂದರೆ ಮೋಡಗಳಿಂದ ಪೂರ್ತಿ ಕತ್ತಲಾಗುತ್ತಿತ್ತು. ಮಳೆಗಾಲದಲ್ಲಿ ಹೆಚ್ಚು ಮಳೆಯಾಗುತ್ತಿದ್ದ ತಿಂಗಳು. ಈಗಿನ ಹಾಗೆ ಮಳೆ ಬಿಟ್ಟು ಬರುತ್ತಿರಲಿಲ್ಲ. ದಿನವಿಡೀ ಮಳೆ ಸುರಿಯುತ್ತಿತ್ತು. ಸೂರ್ಯನ ಬೆಳಕೂ ಹೆಚ್ಚು ಕಾಲ ಸರಿಯಾಗಿ ಇರುತ್ತಿರಲಿಲ್ಲ. ಹಾಗಾಗಿ ರೋಗಗಳು ಹೆಚುತ್ತಿದ್ದವು. ಅದಕ್ಕಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ವಿವಿಧ ಗಿಡ ಮೂಲಿಕೆಗಳ ಕಷಾಯಗಳನ್ನು ಕುಡಿಯುತ್ತಿದ್ದರು.

ಆಟಿ ತಿಂಗಳಲ್ಲಿ ಆಡುವಂತಹ ತುಳುನಾಡ ಆಟಗಳು
ಆಟಿ ತಿಂಗಳು ಕೃಷಿ ಕೆಲಸಕ್ಕೆ ಬಿಡುವು ಸಿಗುವ ಅತಿಯಾದ ಮಳೆ ಬೀಳುವ ಸಮಯವಾಗಿರುವ ಕಾರಣ ರೈತರ ಮನೆಯಲ್ಲಿ ಸಮಯ ಕಳೆಯಲು ವಿವಿಧ ಆಟಗಳನ್ನು ಆಡುತ್ತಿದ್ದರು.ಅದರಲ್ಲಿ ಒಂದು
ಚೆನ್ನೆಮಣೆ ಕೃಷಿ ಕೆಲಸಕ್ಕೆ ಬಿಡುವಿದ್ದ ಕಾರಣ ಮನೆಯವರೆಲ್ಲ ಸೇರಿ ಮಳೆ ಬರುವಂತ ಸಂದರ್ಭದಲ್ಲಿ ಈ ತರದ ಆಟಗಳನ್ನು ಆಡುತ್ತಿದ್ದರು ಅಲ್ಲದೆ ಮನೆಯ ಮಕ್ಕಳಿಗೆ ವೀರಪುರುಷರ ಕಥೆಗಳನ್ನು,ಹೇಳುತ್ತಿದ್ದರು

ಆಟಿ ತಿಂಗಳು ಅಶುಭ ಅಲ್ಲ.ಬಡತನದ ಕಾಲವಾಗಿದ್ದುದರಿಂದ ಹಿಂದಿನವರಿಗೆ ಈ ತಿಂಗಳಲ್ಲಿ ಮದುವೆ ಇನ್ನಿತರ ಶುಭ ಕಾರ್ಯಗಳನ್ನು ನಡೆಸಲು ಆರ್ಥಿಕ ಸಮಸ್ಯೆ ಇದ್ದುದರಿಂದ,ಅಲ್ಲದೇ ತುಂಬಾ ಮಳೆ ಸುರಿಯುವುದರಿಂದ ಕಾರ್ಯಕ್ರಮ ನಡೆಸುವುದೂ ಕಷ್ಟ ಜೊತೆಗೆ ಮನೆಯಿಂದ ಹೊರಗೆ ಹೋಗುವುದಕ್ಕೆ ಮಳೆಯ ಕಾರಣ ತೊಂದರೆ ಆಗುತ್ತದೆ ಎಂಬ ಕಾರಣದಿಂದ ಆ ಸಂದರ್ಭದಲ್ಲಿ ಯಾವುದೇ ಕಾರ್ಯಕ್ರಮಗಳನ್ನು ನಡೆಸುತ್ತಿರಲಿಲ್ಲವೇನೋ..
ಸುಮಾರು ನಾಲ್ಕೈದು ದಶಕಗಳ ಹಿಂದಿನ ವರೆಗೂ ಈ ಆಟಿ ಅನ್ನುವುದು ದುಡಿಯುವ ಶ್ರಮಿಕ ಬೇಸಾಯವೇ ಪ್ರಧಾನವಾಗಿದ್ದ, ಆರ್ಥಿಕವಾಗಿ ಸಶಕ್ತವಲ್ಲದ ಕುಟುಂಬಗಳಿಗೆ ಪ್ರಯಾಸಕರ ಆಗಿತ್ತು.ಆಗ ತಾನೇ ಭತ್ತದ ಉಳುಮೆ- ನಾಟಿ ಕಾರ್ಯ ಪೂರ್ಣಗೊಂಡು ನಿರ್ದಿಷ್ಟ ವರ್ಗಕ್ಕೆ ಆದಾಯ ಮೂಲವಿರಲಿಲ್ಲ. ನಿಜ ಅರ್ಥದ ಕಷ್ಟ ಕಾರ್ಪಣ್ಯದ ದಿನಗಳು. ಧೋ ಎಂದು ಸುರಿಯುವ ಮಳೆಯ ನಡುವೆ ಕೆಲಸ ಕಾರ್ಯಗಳಿಲ್ಲ ಆರ್ಥಿಕ ಅಶಕ್ತ ಕುಟುಂಬಗಳಿಗೆ ಒಲೆಗೆ ಬೆಂಕಿ ಹಚ್ಚುವುದೂ ದುಸ್ತರ. ಆಗಿನ ಯಜಮಾನರಿಂದ ಅಥವಾ ಅಂಗಡಿ ಮಾಲಕರಿಂದ ಭತ್ತ, ಅಕ್ಕಿ, ಬೇಳೆ, ತರಕಾರಿ ತರಬೇಕಾದ ಅನಿವಾರ್ಯತೆ. ಯಜಮಾನರಿಂದ ಅಕ್ಕಿ ತಂದರೆ, ಮುಂದೆ ದುಡಿದು ಪೊಲಿ ಸಹಿತ ಅಂದರೆ ಅದೇ ಪ್ರಮಾಣದ ಬಡ್ಡಿ ತೆರಬೇಕು. (ಈಗ ಅಂತಹ ಪರಿಸ್ಥಿತಿ ಇಲ್ಲ).
ಕಾಲಕ್ಕೆ ತಕ್ಕಂತೆ,ಬದಲಾಗುವ ಪರಿಸ್ಥಿತಿಗೆ ತಕ್ಕಂತೆ,ಮನುಷ್ಯನ ಜೀವನಕ್ರಮ,ಆಚರಣೆಗಳೂ ಸಹ ಹೊಸರೂಪ ಪಡೆದುಕೊಳ್ಳುತ್ತವೆ.ಹಾಗಾಗಿ ತುಳುವರ ಆಟಿ ತಿಂಗಳಿನ ಕೆಲವೊಂದು ಆಚರಣೆಗಳು, ಪದ್ಧತಿಗಳು ಮರೆಯಾಗುತ್ತಿರುವ ಈಗಿನ ಕಾಲಘಟ್ಟದಲ್ಲಿ ಆಟಿ ತಿಂಗಳ ಮಹತ್ವ ಸಾರುವಂತ ಇಂತಹ ಆಚರಣೆಗಳ ಬಗ್ಗೆ ನಮ್ಮ ಮುಂದಿನ ಪೀಳಿಗೆಗೆ ತಿಳಿಸಿಕೊಟ್ಟು ,ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂದು ಆಟಿಡೊಂಜಿ ಕೂಟ,ಆಟಿಡೊಂಜಿ ದಿನ ಅಂತ ಆಚರಿಸಿ,ತುಳುವ ಪದ್ಧತಿಯ ಪರಂಪರೆಯನ್ನು ತಿಳಿಸಿಕೊಟ್ಟು, ಉಳಿಸಿಕೊಂಡು ಹೋಗುವ ಇಂತಹ ಕಾರ್ಯಕ್ರಮಗಳು ನಿರಂತರ ನಡೆಯಬೇಕು.ತುಳುವ ಸಂಸ್ಕೃತಿಯ ಪ್ರಾಕೃತಿಕ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆ ಎಲ್ಲೆಡೆ ಪಸರಲಿ.

ಡಾ.ಸುಮತಿ ಪಿ..

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page