
ಲಕ್ನೋ: ಶ್ರೀ ಕಾಶಿ ವಿಶ್ವನಾಥ ಧಾಮದಲ್ಲಿ ಪಾವಿತ್ರ್ಯತೆ, ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಆಗಸ್ಟ್ 11 ರಿಂದ ಎಲ್ಲಾ ರೀತಿಯ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು ಎಂದು ಮಂದಿರದ ಆಡಳಿತ ಮಂಡಳಿ ಘೋಷಣೆ ಮಾಡಿದೆ.
ಆಡಳಿತ ಮಂಡಳಿಯು ಧಾಮದ ಒಳಗೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ನಿಷೇಧದ ಬಗ್ಗೆ ಜಾಗೃತಿ ಮೂಡಿಸುವ ಪೋಸ್ಟರ್ಗಳನ್ನು ಪ್ರದರ್ಶಿಸಿದ್ದು ಈ ಪೋಸ್ಟರ್ಗಳಲ್ಲಿ, ಆಗಸ್ಟ್ 11 ರಿಂದ ಯಾವುದೇ ರೀತಿಯ ಪ್ಲಾಸ್ಟಿಕ್ ಪಾತ್ರೆಗಳೊಂದಿಗೆ ಮಂದಿರಕ್ಕೆ ಪ್ರವೇಶಿಸಲು ಅನುಮತಿಯಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ. ಈ ರೀತಿಯಾಗಿ ಭಕ್ತರಿಗೆ ಧಾಮದ ಪಾವಿತ್ರ್ಯತೆ, ಸ್ವಚ್ಛತೆ ಮತ್ತು ಪ್ಲಾಸ್ಟಿಕ್ ಮುಕ್ತ ವಾತಾವರಣವನ್ನು ಕಾಪಾಡಲು ಸಹಕರಿಸುವಂತೆ ವಿನಂತಿಸಿಕೊಂಡಿದೆ.
ಈ ಕುರಿತು ಮಂದಿರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವ ಭೂಷಣ್ ಮಿಶ್ರಾ ಮಾತನಾಡಿ, ಕಾಶಿ ವಿಶ್ವನಾಥ ಧಾಮ ಕೇವಲ ಆಧ್ಯಾತ್ಮಿಕ ಕೇಂದ್ರವಾಗಿರದೆ, ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಗೆ ಮಾದರಿಯಾಗಬೇಕು. ಈ ಉಪಕ್ರಮವು ಪವಿತ್ರ ವಾತಾವರಣವನ್ನು ಹೊಂದಿರುವ ಧಾಮವನ್ನು ಮಾಲಿನ್ಯ ಮುಕ್ತವಾಗಿರಿಸುವ ಗುರಿಯನ್ನು ಹೊಂದಿದೆ. ಸಾವನ್ ತಿಂಗಳಿನ ಮೊದಲ ಸೋಮವಾರದಿಂದ ಭಕ್ತರಿಗೆ ಪ್ಲಾಸ್ಟಿಕ್ ಬುಟ್ಟಿಗಳಲ್ಲಿ ಇತರ ಕಾಣಿಕೆಗಳು ಹಾಗೂ ಪಾಸ್ಟಿಕ್ ಬಾಟಲಿಗಳಲ್ಲಿ ತರದಂತೆ ಜಾಗೃತಿ ಅಭಿಯಾನವನ್ನು ಆರಂಭಿಸಲಾಗಿದೆ ಎಂದು ಹೇಳಿದ್ದಾರೆ.
ಹೀಗಾಗಿ ಭಕ್ತರು ಶಿವಲಿಂಗಕ್ಕೆ ಜಲಾರ್ಪಣೆ ಮಾಡಲು ಪ್ಲಾಸ್ಟಿಕ್ ಬಾಟಲಿಗಳ ಬದಲಿಗೆ, ಲೋಹದ ಪಾತ್ರೆಗಳು ಅಥವಾ ಇತರ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಲು ಸೂಚಿಸಲಾಗಿದೆ. ಈ ಯೋಜನೆಯನ್ನು ಯಶಸ್ವಿಗೊಳಿಸಲು ವಾರಾಣಸಿ ಮಹಾನಗರ ಪಾಲಿಕೆ, ಹಲವಾರು ಎನ್ಜಿಒಗಳು ಮತ್ತು ಸ್ಥಳೀಯ ಸ್ವಯಂಸೇವಕರು ಸಹಕಾರ ನೀಡುತ್ತಿದ್ದಾರೆ.





