
ಬೆಂಗಳೂರು: ರಾಜ್ಯ ಸರ್ಕಾರವು ಅಲ್ಪಸಂಖ್ಯಾತರಿಗೆ ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ಹೊಸ ಮೌಲಾನಾ ಆಜಾದ್ ಮಾದರಿ ಶಾಲೆಗಳನ್ನು ತೆರೆಯಲು ಸರ್ಕಾರ ಆದೇಶ ಹೊರಡಿಸಿ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.
2024-25ರ ಬಜೆಟ್‌ನಲ್ಲಿ ಘೋಷಿಸಿದ್ದ 100 ಆಜಾದ್ ಶಾಲೆಗಳ ಪೈಕಿ ಬಾಕಿ 50 ಶಾಲೆಗಳನ್ನು 25 ಜಿಲ್ಲೆಗಳ 43 ತಾಲೂಕುಗಳಲ್ಲಿ ತೆರೆಯಲು ಮುಂದಾಗಿದ್ದು ಮೌಲಾನಾ ಆಜಾದ್ ಮಾದರಿ ಶಾಲೆಗಳನ್ನು ಒಟ್ಟು 350 ಬೋಧಕ ಹುದ್ದೆಗಳೊಂದಿಗೆ ತೆರೆಯಲು ಆದೇಶಿಸಿದೆ. ಅಲ್ಪಸಂಖ್ಯಾತ ಸಮುದಾಯದ ಮಕ್ಕಳಿಗೆ ಮಾತ್ರ ಮೀಸಲಿರುವ ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ ಮಕ್ಕಳಿಗೆ ಉಚಿತ ವಸತಿ ಸಹಿತ ಶಿಕ್ಷಣ ಒದಗಿಸಲಾಗುತ್ತದೆ. ಈಗಾಗಲೇ ಅಲ್ಪಸಂಖ್ಯಾತರಿಗೆ 4% ಗುತ್ತಿಗೆ ಮೀಸಲಾತಿ, ವಸತಿ ಯೋಜನೆ ಮನೆಗಳಿಗೆ 15% ಮೀಸಲು ಹೆಚ್ಚಳ ಬಳಿಕ ಸರ್ಕಾರದ ಮತ್ತೊಂದು ನಿರ್ಧಾರ ಇದೀಗ ಬಾರಿ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
ಸರ್ಕಾರದ ಈ ನಡೆಯನ್ನು ಬಿಜೆಪಿ ನಾಯಕರು ವಿರೋಧಿಸಿದ್ದು ಈ ಸರ್ಕಾರ ತುಷ್ಟೀಕರಣದ ಪರಾಕಾಷ್ಠೆಗೆ ಹೋಗಿದೆ. ಕೇವಲ ಒಂದೇ ಸಮಯದಾಯದ ಓಲೈಕೆಗೆ ಮುಂದಾಗಿದೆ. ಸರ್ಕಾರ ಇದುವರೆಗೆ ಎಸ್‌ಸಿ, ಎಸ್‌ಟಿ ಮಕ್ಕಳಿಗೆ ಎಷ್ಟು ಶಾಲೆ, ಎಷ್ಟು ಲ್ಯಾಪ್‌ಟಾಪ್, ಎಷ್ಟು ಸ್ಕಾಲರ್ ಶಿಪ್ ಕೊಟ್ಟಿದೆ ಹೇಳಲಿ. ಹಿಂದುಳಿದ ವರ್ಗದ ಮಕ್ಕಳನ್ನು ಸರ್ಕಾರ ಮರೆತೇ ಬಿಟ್ಟಿದೆ ಎಂದು ಬಿಜೆಪಿ ನಾಯಕ ಪಿ.ರಾಜೀವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.