ಹಿಂದೂ ಪರ ಸಂಘಟನೆಯಿಂದ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ತರಗತಿ ಪ್ರವೇಶಕ್ಕೆ ಅವಕಾಶ

ಚಿಕ್ಕಮಗಳೂರು: ಜಿಲ್ಲೆಯ ಖಾಸಗಿ ಕಾಲೇಜೊಂದರಲ್ಲಿ ಅಯ್ಯಪ್ಪ ಮಾಲೆ ಧರಿಸಿದ್ದ ಮೂವರು ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಹೊರ ಕಳುಹಿಸಿದ ಘಟನೆ ನಡೆದಿದೆ.
ಮೊದಲ ವರ್ಷದ ಪಿಯುಸಿ ಓದುತ್ತಿರುವ ಮೂರು ವಿದ್ಯಾರ್ಥಿಗಳು ಅಯ್ಯಪ್ಪಮಾಲೆ ಧರಿಸಿ ಕಾಲೇಜಿಗೆ ಬಂದಿದ್ದು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಕೂರಲು ಅವಕಾಶ ನೀಡದೆ ಹೊರ ಕಳುಹಿಸಿದ್ದಾರೆ.
ಈ ಕುರಿತು ಭಾರಿ ಆಕ್ರೋಶ ವ್ಯಕ್ತವಾಗಿದ್ದು ಹಿಂದೂಪರ ಸಂಘಟನೆಗಳ ಮುಖಂಡರು ಕಾಲೇಜಿಗೆ ಆಗಮಿಸಿ ಪ್ರಾಂಶುಪಾಲರ ತಾರತಮ್ಯದ ಬಗ್ಗೆ ಪ್ರಶ್ನೆ ಮಾಡಿ ಕಾಲೇಜು ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಮಜಾಯಿಷಿ ನೀಡಿದ ಪ್ರಾಂಶುಪಾಲರು ಕಾಲೇಜಿನಲ್ಲಿ ಸಮವಸ್ತ್ರ ಬಿಟ್ಟರೆ ಬೇರೆ ಯಾವುದೇ ವಸ್ತ್ರ ಸಂಹಿತೆಗೆ ಅವಕಾಶವಿಲ್ಲ ಎಂದು ಹೇಳಿದ್ದು ಯಾರಾದರೂ ಬುರ್ಖಾ ಧರಿಸಿ ಬಂದರೆ ಇದೇ ರೀತಿ ಮಾಡುತ್ತೀರಾ? ಎಂದು ಹಿಂದೂ ಪರ ಸಂಘಟನೆಗಳ ಮುಖಂಡರು ತಿರುಗೇಟು ನೀಡಿದ್ದಾರೆ. ಪ್ರತಿರೋಧಕ್ಕೆ ಮಣಿದ ಕಾಲೇಜು ಸಿಬ್ಬಂದಿ ಕೊನೆಗೆ ವಿದ್ಯಾರ್ಥಿಗಳ ತರಗತಿ ಪ್ರವೇಶಕ್ಕೆ ಅವಕಾಶ ನೀಡಿದ್ದಾರೆ ಎನ್ನಲಾಗಿದೆ.





