
ನವದೆಹಲಿ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪೊಂದನ್ನು ಹೊರಡಿಸಿದ್ದು, ಅದೇನೆಂದರೆ ಒಂದುವೇಳೆ ಮಗಳು ಅಪ್ಪನ ಇಚ್ಛೆಗೆ ವಿರುದ್ಧವಾಗಿ ಪ್ರೀತಿಸಿ ಮದುವೆಯಾದರೆ ಅಥವಾ ಬೇರೆ ಧರ್ಮದವನನ್ನು ಮದುವೆಯಾದರೆ ಆಕೆಗೆ ಅಪ್ಪನ ಆಸ್ತಿಯಲ್ಲಿ ಪಾಲು ಸಿಗುವುದಿಲ್ಲ. ಸಮುದಾಯದ ಹೊರಗೆ ಮದುವೆಯಾದರೆ ಅಥವಾ ಮಗಳು ಅಪ್ಪನಿಗೆ ನೋವುಂಟಾಗುವಂತೆ ವರ್ತಿಸಿದರೆ ಆ ತಂದೆ ತನ್ನ ಮಗಳನ್ನು ಆಸ್ತಿಯ ವಿಲ್‌ನಿಂದ ಹೊರಗಿಡಬಹುದು. ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದೆ.
ನ್ಯಾಯಮೂರ್ತಿಗಳಾದ ಅಶಾನುದ್ದೀನ್ ಅಮಾನುಲ್ಲಾ ಮತ್ತು ಕೆ. ವಿನೋದ್ ಚಂದ್ರನ್ ನೇತೃತ್ವದ ನ್ಯಾಯ ಪೀಠವು ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯವು ನೀಡಿದ ಶೈಲಾ ಜೋಸೆಫ್‌ಗೆ ಅವರ ತಂದೆ ಎನ್.ಎಸ್. ಶ್ರೀಧರನ್ ಅವರ ಆಸ್ತಿಯಲ್ಲಿ ಪಾಲು ನೀಡಬೇಕು ಎಂಬ ತೀರ್ಪನ್ನು ರದ್ದುಗೊಳಿಸಿದೆ.
ಆ ಮಹಿಳೆ ಬೇರೆ ಧರ್ಮದ ಯುವಕನನ್ನು ವಿವಾಹವಾಗಿದ್ದರು. ಹೀಗಾಗಿ, ಶ್ರೀಧರನ್ ತನ್ನ ಮಗಳನ್ನು ದೂರವೇ ಇಟ್ಟಿದ್ದರು. ತಮ್ಮ ವಿಲ್ ನಲ್ಲಿ ಕೂಡ ಆಕೆಗೆ ಪಾಲು ಬರೆದಿರಲಿಲ್ಲ. ಇದನ್ನು ವಿರೋಧಿಸಿ, ತನ್ನ ತಂದೆಯ ಆಸ್ತಿಯಲ್ಲಿ ತನಗೂ ಪಾಲು ಬೇಕೆಂದು ಆಕೆ ಕಾನೂನು ಮೊರೆಹೋಗಿದ್ದರು. ಕೆಳ ನ್ಯಾಯಾಲಯ ಶೈಲಾ ಅವರಿಗೆ ಅವರ ತಂದೆಯ ಆಸ್ತಿಯಲ್ಲಿ ಅವರ ಇತರ 8 ಸಹೋದರರೊಂದಿಗೆ ಸಮಾನ ಪಾಲು ನೀಡಬೇಕೆಂದು ತೀರ್ಪು ನೀಡಿತ್ತು. ಆದರೆ, ಸುಪ್ರೀಂ ಕೋರ್ಟ್ ಈ ತೀರ್ಪನ್ನು ರದ್ದುಗೊಳಿಸಿ ವಿಲ್ ಪ್ರಕಾರ ಶೈಲಾ ಅವರಿಗೆ ಅವರ ತಂದೆಯ ಆಸ್ತಿಯಲ್ಲಿ ಯಾವುದೇ ಹಕ್ಕಿಲ್ಲ ಎಂದು ತಿಳಿಸಿದೆ.
ಲಿಂಗ ಸಮಾನತೆಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ. ಆ ಪ್ರಕಾರ ಹೇಳುವುದಾದರೆ ಮಹಿಳೆಗೂ ಆಸ್ತಿಯಲ್ಲಿ ಸಮಾನ ಹಕ್ಕಿದೆ. ಆದರೆ, ಈ ಪ್ರಕರಣದಲ್ಲಿ ವಿಲ್ ಬರೆದ ವ್ಯಕ್ತಿಯ ಇಚ್ಛೆ ಮುಖ್ಯವಾಗಿದೆ. ಅವರೇನಾದರೂ ವಿಲ್ ಬರೆಯದೇ ಇದ್ದಿದ್ದರೆ ಪಿತ್ರಾರ್ಜಿತ ಆಸ್ತಿಯಲ್ಲಿ ಮಗಳಿಗೂ ಪಾಲು ಇರುತ್ತಿತ್ತು. ಆದರೆ, ಅವರು ಮಗಳಿಗೆ ಆಸ್ತಿ ಸಿಗಬಾರದು ಎಂಬ ಕಾರಣಕ್ಕೆ ಉದ್ದೇಶಪೂರ್ವಕವಾಗಿ ವಿಲ್ ಬರೆದಿರುವುದರಿಂದ ಮತ್ತು ಇದು ಅವರ ಕೊನೆಯ ವಿಲ್ ಆಗಿರುವುದರಿಂದ ಅವರ ನಿರ್ಧಾರವೇ ಅಂತಿಮವಾಗಿರುತ್ತದೆ. ಕಾನೂನು ಇದರಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ನ್ಯಾಯಪೀಠವು ಸ್ಪಷ್ಟನೆ ನೀಡಿದೆ.





