
ಬೆಂಗಳೂರು: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸ್ಯಾಂಡಲ್‌ವುಡ್‌ನ ಹಿರಿಯ ನಟ ಹಾಗೂ ಹಾಸ್ಯ ಕಲಾವಿದ ಉಮೇಶ್ ಅವರ ಸ್ಥಿತಿ ಗಂಭೀರವಾಗಿದ್ದು, ಶಾಂತಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗಳೂರಿನ ಮುದ್ದಿನಪಾಳ್ಯದಲ್ಲಿ ತಮ್ಮ ಕುಟುಂಬದೊಂದಿಗೆ ವಾಸವಾಗಿದ್ದ 70 ವರ್ಷದ ಉಮೇಶ್ ಅವರು ಶುಕ್ರವಾರ ಮನೆಯಲ್ಲಿಯೇ ಕೆಳಗೆ ಬಿದ್ದು ಪ್ರಜ್ಞೆ ತಪ್ಪಿದ್ದು ಇದೀಗ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಮೈಸೂರು ಶ್ರೀಕಂಠಯ್ಯ ಉಮೇಶ್, ಎಂಎಸ್ ಉಮೇಶ್ ಎಂದೇ ಕನ್ನಡ ಸಿನಿ ಜಗತ್ತಿಗೆ ಪರಿಚಿತರಾಗಿದ್ದು ಸಿನಿಮಾಗಳಲ್ಲಿ ವಿವಿಧ ಪಾತ್ರಗಳ ಮೂಲಕ ಅದರಲ್ಲೂ 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿ ಜನರನ್ನು ರಂಜಿಸಿದ್ದಾರೆ. ತಮ್ಮ ಕಾಮಿಡಿ ಟೈಮಿಂಗ್, ಮುಖಭಾವ ಹಾಗೂ ಅಪರೂಪದ ಡೈಲಾಗ್ ಡೆಲಿವರಿ ಮೂಲಕ ಅವರು ಸಿನಿರಂಗದಲ್ಲಿ ಜನಪ್ರಿಯತೆ ಗಳಿಸಿದ್ದರು. ಇದೀಗ ಅವರ ಆರೋಗ್ಯ ಚೇತರಿಕೆ ಕಾಣಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.






















































