
ಬೆಂಗಳೂರು : ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದಲ್ಲಿ ಅನಧಿಕೃತ ಜಾನುವಾರು ಸಾಗಣೆ ಸಮಯದಲ್ಲಿ ವಶಪಡಿಸಿಕೊಂಡ ವಾಹನಗಳನ್ನು ‘ಬ್ಯಾಂಕ್ ಖಾತರಿ’ ಬದಲು ‘ನಷ್ಟ ಭರ್ತಿ ಮುಚ್ಚಳಿಕೆ’ ನೀಡಿ ಬಿಡಿಸಿಕೊಳ್ಳಲು ಅನುವಾಗುವಂತೆ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ- 2020ಕ್ಕೆ ತಿದ್ದುಪಡಿ ತರಲು ತೀರ್ಮಾನಿಸಲಾಗಿದೆ.
ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ-2020ರಲ್ಲಿ ‘ಬ್ಯಾಂಕ್ ಖಾತರಿ’ ಎಂಬ ಪದ ಎಲ್ಲೆಲ್ಲಿ ಬರುವುದೋ ಆ ಪದದ ನಂತರ ‘ಅಥವಾ ನಷ್ಟ ಪರಿಹಾರ ಬಾಂಡ್’ ಎಂದು ತಿದ್ದುಪಡಿ ತರಲು ಸಚಿವ ಸಂಪುಟ ಒಪ್ಪಿಗೆ ನೀಡಿದ್ದು ಹೀಗಾಗಿ ಈಗ ಇರುವ ನಿಯಮದ ಪ್ರಕಾರ ಜಾನುವಾರುಗಳ ಅನಧಿಕೃತ ಸಾಗಣೆ ವೇಳೆ ಸಿಕ್ಕಿಬಿದ್ದ ವಾಹನಗಳನ್ನೂ ಬ್ಯಾಂಕ್ ಗ್ಯಾರಂಟಿ ನೀಡಿ ಮಾತ್ರ ಬಿಡಿಸಿಕೊಳ್ಳಬೇಕು ಎಂಬ ನಿಯಮದಲ್ಲಿ ಕೊಂಚ ತಿದ್ದುಪಡಿ ಮಾಡಿ ‘ಬ್ಯಾಂಕ್ ಖಾತರಿ ಅಥವಾ ನಷ್ಟ ಭರ್ತಿ ಮುಚ್ಚಳಿಕೆ’ ನೀಡಿ ವಾಹನಗಳನ್ನು ಬಿಡಿಸಿಕೊಳ್ಳಬಹುದಾಗಿದೆ.
ಬ್ಯಾಂಕ್ ಖಾತೆಯಲ್ಲಿ 3 ರಿಂದ 5 ಲಕ್ಷ ರು. ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಬ್ಯಾಂಕ್ ಖಾತರಿ ನೀಡುವುದು ಕಡ್ಡಾಯವಾಗಿತ್ತು. ಇದರಿಂದ ಸಣ್ಣಪುಟ್ಟ ವಾಹನಗಳ ಬಾಡಿಗೆಯಿಂದಲೇ ಜೀವನ ನಡೆಸುತ್ತಿರುವ ಕುಟುಂಬಗಳಿಗೆ ಕಷ್ಟವಾಗುತ್ತದೆ ಎಂಬ ಕಾರಣದಿಂದ ವಿಧೇಯಕಕ್ಕೆ ತಿದ್ದುಪಡಿ ತರಲು ಸಂಪುಟದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.



















